Sunday, 15th December 2024

Farooq Abdullah: ಕಾಶ್ಮೀರದಲ್ಲಿ ಮುಫ್ತಿಯೇ ಕಿಂಗ್‌ ಮೇಕರ್‌? PDP ಜತೆ ಮೈತ್ರಿಗೆ ಮುಂದಾದ ನ್ಯಾಷನಲ್ ಕಾನ್ಫರೆನ್ಸ್

jk election

ಶ್ರೀನಗರ: ಅಗತ್ಯವಿದ್ದರೆ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಬೆಂಬಲದೊಂದಿಗೆ ಜಮ್ಮು ಮತ್ತು ಕಾಶ್ಮೀರ(JK Election)ದಲ್ಲಿ ಸರ್ಕಾರ ರಚಿಸಲು ತಮ್ಮ ಪಕ್ಷವು ಮುಕ್ತವಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಭಾನುವಾರ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂಬುದು ಬಯಲಾಗುತ್ತಿದ್ದಂತೆ ಕಾಂಗ್ರೆಸ್‌-ಎನ್‌ ಸಿ ಮೈತ್ರಿ ಇದೀಗ ಪಿಡಿಪಿಯತ್ತ ಮುಖಮಾಡಿದೆ.

ಸಂಭಾವ್ಯ ಮೈತ್ರಿಗಳ ಕುರಿತು ಮಾತನಾಡಿದ ಫಾರೂಕ್‌ ಅಬ್ದುಲ್ಲಾ, ಎನ್‌ಸಿ-ಕಾಂಗ್ರೆಸ್ ಮೈತ್ರಿಯು ಈ ಪ್ರದೇಶದಲ್ಲಿ ನಿರುದ್ಯೋಗ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಪಿಡಿಪಿಯಿಂದ ಬೆಂಬಲವನ್ನು ಅಪೇಕ್ಷಿಸುತ್ತದೆ. ನಾವೆಲ್ಲರೂ ಒಂದೇ ವಿಷಯಕ್ಕಾಗಿ ಕೆಲಸ ಮಾಡಿದರೆ, ರಾಜ್ಯದ ಜನರ ಪರಿಸ್ಥಿತಿ ಸುಧಾರಣೆಗಾಗಿ, ನಿರುದ್ಯೋಗವನ್ನು ತೆಗೆದುಹಾಕುವುದು, ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಎಲ್ಲಾ ಸಂಕಷ್ಟಗಳನ್ನು ತೆಗೆದುಹಾಕಲು ಸಾಧ್ಯ ಎಂದು ಅವರು ಹೇಳಿದರು.

ಪಿಡಿಪಿ ಪ್ರತಿಕ್ರಿಯೆ

ಇನ್ನು ಫಾರೂಕ್‌ ಅಬ್ದುಲ್ಲಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮೈತ್ರಿಕೂಟಕ್ಕೆ ಸೇರುವ ಊಹಾಪೋಹ ಅನಗತ್ಯ ಎಂದಿದ್ದಾರೆ. ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಮಾತನಾಡಿದ್ದು, ತಮ್ಮ ಪಕ್ಷವು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೇರುವ ಊಹಾಪೋಹಗಳನ್ನು ಅನಗತ್ಯ. ಫಲಿತಾಂಶ ಹೊರಬಿದ್ದ ನಂತರವೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯ ಎಂದಿದ್ದಾರೆ.

ಸಮೀಕ್ಷೆ ಹೇಳೋದೇನು?

ಕಣಿವೆ ರಾಜ್ಯ ಜಮ್ಮು ಕಾಶ್ಮೀರ(Jammu-Kashmir Assembly election)ದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲದಿದ್ದರೂ, ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಮತ್ತೊಂದು ಕಡೆ ಸ್ವತಂತ್ರವಾಗಿ ಸ್ಪರ್ಧೆಗಿಳಿದಿರುವ ಬಿಜೆಪಿಯೂ ಇಂಡಿ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯುವ ಸಾಧ್ಯತೆ ಬಹಳಷ್ಟಿದೆ.

ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಪೀಪಲ್ಸ್‌ ಪಲ್ಸ್‌ ವರದಿಯ ಪ್ರಕಾರ ಯಾವ ಪಕ್ಷವೂ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಈ ಬಾರಿ ಜಂಟಿಯಾಗಿ ಕಣಕ್ಕಿಳಿದಿರುವ ಕಾಂಗ್ರೆಸ್‌ಮತ್ತು ಓಮರ್‌ ಅಬ್ದುಲ್ಲಾ ನೇತೃತ್ವದ ಎನ್‌ಸಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ದೈನಿಕ ಭಾಸ್ಕರ್‌, ಧ್ರುವ ರಿಸರ್ಚ್‌ ಮತ್ತು ಪೀಪಲ್ಸ್‌ ಪಲ್ಸ್‌ ಸೇರಿದಂತೆ ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಪೀಪಲ್ಸ್ ಪಲ್ಸ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ 33-35 ಸ್ಥಾನಗಳೊಂದಿಗೆ J&K ನಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 23 ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಎರಡನೇ ಅತಿದೊಡ್ಡ ಪಕ್ಷವಾಗಲಿದೆ.

ಪಿಡಿಪಿ ಕಿಂಗ್‌ ಮೇಕರ್‌

ಕಳೆದ ಬಾರಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಗೆದ್ದು ಜಮ್ಮು-ಕಾಶ್ಮೀರದ ಗದ್ದುಗೆ ಹಿಡಿದಿದ್ದ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಗೆ ಶೇಕಡಾ 5 ರಷ್ಟು ಮತ ಹಂಚಿಕೆಯಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಇನ್ನು ಪಿಡಿಪಿ ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮಲಿದೆ. ಇತರರು ಈ ಪ್ರದೇಶದಲ್ಲಿ 18 ಶೇಕಡಾ ಮತಗಳನ್ನು ಗಳಿಸಬಹುದು ಎಂದು ಎಕ್ಸಿಟ್‌ ಪೋಲ್‌ ಸಮೀಕ್ಷೆ ಹೇಳಿದೆ.

ಈ ಸುದ್ದಿಯನ್ನೂ ಓದಿ: Haryana Election: ಎಕ್ಸಿಟ್‌ ಪೋಲ್‌ ಪ್ರಕಟ; ಹರಿಯಾಣ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ- ಹೂಡಾ, ಸೆಲ್ಜಾ ನಡುವೆ ಪೈಪೋಟಿ