Friday, 20th September 2024

ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಗೃಹಬಂಧ ’ಮುಕ್ತ’

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಕೊನೆಗೂ ಬಿಡುಗಡೆ ಮಾಡಲಾಗಿದೆ.

2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕುವ 370ನೇ ವಿಧಿಯ ರದ್ದತಿ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿ ಬಂಧಿಸಲಾಗಿತ್ತು. ಸುಮಾರು 14 ತಿಂಗಳ ನಂತರ ಅವರನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಯಾವುದೇ ವಿಚಾರಣೆಯಿಲ್ಲದೆ ಮೂರು ತಿಂಗಳ ಕಾಲ ಬಂಧಿಸಿಡಲು ಈ ಕಾಯ್ದೆ ಅವಕಾಶ ನೀಡುತ್ತದೆ. ಮೆಹಬೂಬ ಅವರ ಮಗಳು ಇಲ್ತಿಜಾ ಮುಫ್ತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮೆಹಬೂಬ ಮುಫ್ತಿ ಬಿಡುಗಡೆಗೆ ಗಡುವು ನಿಗದಿ ಪಡಿಸಿತ್ತು.

ಮುಫ್ತಿ ಅವರನ್ನು ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಚೆಷ್ಮಾ ಶಹಿ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಬಳಿಕ ಶ್ರೀನಗರದ ಬೇರೆ ಸರ್ಕಾರಿ ಅತಿಥಿ ಗೃಹಕ್ಕೆ ವರ್ಗಾಯಿಸಲಾಗಿತ್ತು. ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಮುಂದುವರಿಸಲಾಗಿತ್ತು.

‘ಹೀಗೆ ಎಷ್ಟು ದಿನಗಳ ಕಾಲ ಮುಫ್ತಿ ಅವರನ್ನು ಬಂಧನದಲ್ಲಿ ಇರಿಸಬಹುದು?’ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಹಾಗೂ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಕೇಳಿತ್ತು. ಈ ಬಗ್ಗೆ ವಿವರಣೆ ನೀಡುವಂತೆ ಎರಡು ವಾರಗಳ ಕಾಲಾವಕಾಶ ನೀಡಿತ್ತು.