ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆ ಮಸಿ ಬಳಿಯಬಹುದು ಎಂಬ ಟ್ವೀಟ್ ಮಾಡಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಪ್ರಸಿದ್ಧಿಯ ಗ್ರೇಟಾ ಥನ್ಬರ್ಗ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್ ಡಾಕ್ಯು ಮೆಂಟ್ ಟ್ವೀಟ್ ಮಾಡಿದ್ದಳು. ನಂತರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಡಿಲೀಟ್ ಮಾಡಿದ್ದಾಳೆ. ಪೋಸ್ಟ್ನ ಸ್ಕ್ರೀನ್ಷಾಟ್ ದಾಖಲೆ ರೂಪದಲ್ಲಿ ಸಿಕ್ಕಿದೆ.
ಯಾವ್ಯಾವ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಪ್ರಚೋದನೆ ನೀಡುವ ದಾಖಲೆಗಳನ್ನು ಗ್ರೇಟಾ ಟ್ವೀಟ್ ಮಾಡಿದ್ದಳು. ಟ್ವೀಟ್ ಮಾಡಿರುವುದು ಯಾರನ್ನು ಓಲೈಸಲು ಹಾಗೂ ನಂತರ ಹೆದರಿ ಟ್ವೀಟ್ ಡಿಲೀಟ್ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಬರುವ ನಿಟ್ಟಿನಲ್ಲಿ ಈಕೆ ಮಾಡಿರುವ ಟ್ವೀಟ್ನಿಂದಾಗಿ, ಸಾಮರಸ್ಯ ಕದಡಲು ಷಡ್ಯಂತ್ರ ರಚಿಸಿರುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.