Saturday, 21st September 2024

ಕಲ್ಲು ತೂರಾಟ ಪ್ರಕರಣ: ಮೂವರ ವಿರುದ್ದ ಎಫ್‌ಐಆರ್‌

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೇಲೆ ಎಫ್ ಐಆರ್ ದಾಖಲಿಸಿ, ಏಳು ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಇಬ್ಬರು ಅಪರಿಚಿತರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ ದ್ದಾರೆ. ಬಿಜೆಪಿ ಮುಖಂಡ ರಾಖೇಶ್ ಸಿಂಗ್ ಮೇಲೂ ಎಫ್ ಐ ಆರ್ ದಾಖಲಿಸಲಾಗಿದೆ. ಶಿರಾಕೊಲ್ ಹಾಗೂ ದೇಬಿಪುರದಲ್ಲಿ ಜನರನ್ನು ಪ್ರಚೋದಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆ ಘಟನೆ ನಡೆದಾಗ ಸಿಂಗ್ ಬೆಂಗಾವಲು ವಾಹನ ದಲ್ಲಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಡೈಮಂಡ್ ಹಾರ್ಬರ್ ಗೆ ಪ.ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ತೆರಳುತ್ತಿದ್ದ ಸಂದರ್ಭ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಘಟನೆಯಲ್ಲಿ ವಿಜಯವರ್ಗಿಯಾ ಅವರ ಕಾರಿನ ಗಾಜು ಪುಡಿಪುಡಿಯಾಗಿದ್ದು, ಕೆಲವರಿಗೆ ಗಾಯವಾಗಿದ್ದ ವರದಿಯಾಗಿತ್ತು.

ಈ ಕೃತ್ಯವನ್ನು ಟಿಎಂಸಿ ಬೆಂಬಲಿಗರು ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದು, ಘಟನೆ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಾಯಕರ ನಡುವೆ ವಾಕ್ಸಮರ ಶುರುವಾಗಿದೆ. ಈ ಘಟನೆ ಕುರಿತು ರಾಜ್ಯಪಾಲ ಜಗದೀಪ್ ಧಾನ್ ಕರ್ ಅವರಿಂದ ಸರ್ಕಾರವು ವರದಿ ಕೇಳಿದ್ದು, ಶುಕ್ರವಾರ ರಾಜ್ಯಪಾಲರು ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.