Monday, 18th November 2024

Fire Accident: ಭಾರೀ ಅಗ್ನಿ ದುರಂತ; ಮೂವರು ಸಜೀವ ದಹನ

fire accident

ಮುಂಬೈ: ಮಹಾರಾಷ್ಟ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಲೋಖಂಡವಾಲಾ ಕಾಂಪ್ಲೆಕ್ಸ್‌ನಲ್ಲಿರುವ ಕಟ್ಟಡವೊಂದರಲ್ಲಿ ಅಗ್ನಿ ಅವಘಡ(Fire Accident) ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಂಧೇರಿ ಪ್ರದೇಶದ ಲೋಖಂಡವಾಲಾ ಕಾಂಪ್ಲೆಕ್ಸ್‌ನ 4 ನೇ ಅಡ್ಡ ರಸ್ತೆಯಲ್ಲಿರುವ ರಿಯಾ ಪ್ಯಾಲೇಸ್ ಕಟ್ಟಡದ 10 ನೇ ಮಹಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರಿಗೆ ಗಾಯಗಳಾಗಿದ್ದು, ಕೂಪರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಚಂದ್ರಪ್ರಕಾಶ್ ಸೋನಿ (74), ಕಾಂತ ಸೋನಿ (74) ಮತ್ತು ಪೆಲುಬೇಟ (42) ಎಂದು ಗುರುತಿಸಲಾಗಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಹಾರಾಷ್ಟ್ರದ ಚೆಂಬೂರ್‌ (Chembur)ನ 2 ಅಂತಸ್ತಿನ ಕಟ್ಟಡದಲ್ಲಿ ಭಾನುವಾರ (ಅಕ್ಟೋಬರ್‌ 6) ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಚೆಂಬೂರಿನ ಸಿದ್ಧಾರ್ಥ್ ಕಾಲೋನಿಯಲ್ಲಿರುವ ಅಂಗಡಿಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಭಾರಿ ಬೆಂಕಿ ಕಾಣಿಸಿಕೊಂಡು, ಅದು ಇಡೀ ಕಟ್ಟಡಕ್ಕೆ ಆವರಿಸಿ ಅದರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಮಂದಿ ಸಜೀವ ದಹನವಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮೃತರನ್ನು ಪ್ಯಾರಿಸ್ ಗುಪ್ತಾ (7), ನರೇಂದ್ರ ಗುಪ್ತಾ (10), ಮಂಜು ಪ್ರೇಮ್ ಗುಪ್ತಾ (30), ಅನಿತಾ ಗುಪ್ತಾ (39), ಪ್ರೇಮ್ ಗುಪ್ತಾ (30), ವಿಧಿ ಗುಪ್ತಾ ಮತ್ತು ಗೀತಾ ಗುಪ್ತಾ ಎಂದು ಗುರುತಿಸಲಾಗಿದೆ. ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Fire Accident: ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಬೆಂಕಿ ತಗುಲಿ 7 ಮಂದಿಯ ಸಜೀವ ದಹನ