ರಾಯಗಢ: ಸುರಿಯುತ್ತಿರುವ ಭಾರಿ ಮಳೆಗೆ ಮಹಾರಾಷ್ಟ್ರದಲ್ಲಿ ಪ್ರವಾಹದ ಸ್ಥಿತಿ ಏರ್ಪಟ್ಟಿದ್ದು, ಭೂಕುಸಿತದ ವರದಿಗಳಾಗಿವೆ. ಮೃತರ ಸಂಖ್ಯೆ 60ಕ್ಕೆ ಏರಿಕೆ ಯಾಗಿದೆ. ರಾಯಗಢ ಜಿಲ್ಲೆಯೊಂದ ರಲ್ಲೇ ಭೂಕುಸಿತ ಮತ್ತು ಪ್ರವಾಹಕ್ಕೆ ಕನಿಷ್ಠ 36 ಮಂದಿ ಮೃತರಾಗಿದ್ದಾರೆ.
ಜಿಲ್ಲೆಯ ತಾಲಾಯ್‌ನಲ್ಲಿ 32, ಸಖರ್ ಸುತರ್‌ವಾಡಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 30 ಮಂದಿ ಭೂಕುಸಿತ, ಪ್ರವಾಹದ ವಿಕೋಪಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿ ಇದ್ದಾರೆ. ಕೊಂಕಣ ಬೆಲ್ಟ್‌ನಲ್ಲಿ ಸಂಭವಿಸಿದ ಸರಣಿ ಭೂಕುಸಿತ ಅವಘಡಗಳಲ್ಲಿ 12ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ರತ್ನಗಿರಿ ಜಿಲ್ಲೆಯ ಚಿಪ್ಲುನ್ ಎಂಬ ಪ್ರದೇಶದಲ್ಲಿ ಸುಮಾರು 5-6 ಸಾವಿರ ಮಂದಿ ಇಕ್ಕಟ್ಟಿಗೆ ಸಿಲುಕಿ ದ್ದಾರೆ ಎಂದು ವರದಿಯಾಗಿದೆ. ‘ಪ್ರಾಥಮಿಕ ವರದಿ ಅನುಸಾರ ರಾಯಗಢದಲ್ಲಿ 30-35 ಮಂದಿ ಮೃತ ಪಟ್ಟಿದ್ದಾರೆ. ರಕ್ಷಣಾ ಕಾರ್ಯ ಬರದಿಂದ ಸಾಗಿದೆ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕರ್ನಾಟಕದ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಇದರಿಂದ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ವಿಜಯ್ ವಾಡೆತ್ತಿಕರ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. 2005 ಮತ್ತು 1967ರಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಸಂಭವಿಸಿದೆ ಎನ್ನಲಾಗುತ್ತಿದೆ.