Saturday, 14th December 2024

ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಿದೆ: ಪ್ರಧಾನಿ ಮೋದಿ

ಗಾಂಧಿನಗರ: ಅಮೆರಿಕ ಅಧ್ಯಕ್ಷರೊಂದಿಗೆ ಜಾಗತಿಕ ಆಹಾರದ ಕೊರತೆಯ ಸಮಸ್ಯೆ ಚರ್ಚಿಸಿರುವು ದಾಗಿ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಭಾರತವು ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಸಿದ್ಧವಾಗಿದೆ ಎಂದು ಹೇಳಿದರು.

ವಿಶ್ವ ವ್ಯಾಪಾರ ಸಂಸ್ಥೆ ಮಂಡಳಿ ಅನುಮತಿ ನೀಡಿದರೆ ಭಾರತವು ಆಹಾರ ದಾಸ್ತಾನು ಪೂರೈಸುತ್ತದೆ ಎಂದು ಮೋದಿ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ‘ಶ್ರೀ ಅನ್ನ ಪೂರ್ಣ ಧಾಮ’ ದಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

‘ಯುದ್ಧದಿಂದಾಗಿ ಪ್ರಪಂಚದ ವಿವಿಧ ಭಾಗಗಳಲ್ಲಿ ಆಹಾರ ಸಂಗ್ರಹವು ಕ್ಷೀಣಿಸುತ್ತಿದೆ. ಪ್ರಪಂಚದ ಆಹಾರ ಸಂಗ್ರಹಣೆಯು ಖಾಲಿಯಾಗುತ್ತಿದೆ. ಡಬ್ಲ್ಯುಟಿಒ ಅನುಮತಿ ನೀಡಿದರೆ, ನಾಳೆಯಿಂದ ಜಗತ್ತಿಗೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ಸಲಹೆ ನೀಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅದಾಲಜ್‌ನಲ್ಲಿ ‘ಶ್ರೀ ಅನ್ನಪೂರ್ಣಧಾಮ ಟ್ರಸ್ಟ್’ ನ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತದ ಅಭಿವೃದ್ಧಿಗೆ ಗುಜರಾತ್‌ನ ಅಭಿವೃದ್ಧಿ ಅಗತ್ಯ’ ಎಂದು ಹೇಳಿದರು.

‘ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುಜರಾತ್ ಯಾವಾಗಲೂ ಸಮಾಜಕ್ಕೆ ಕೊಡುಗೆ ನೀಡಿದೆ. ಪಾಟಿದಾರ್ ಸಮುದಾಯವೂ ಅದರ ಭಾಗ ವಾಗಿದೆ’ ಎಂದು ಹೇಳಿದರು.