Thursday, 5th December 2024

Fraud Case: ಹಾಲಿಡೇ ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಪಂಗನಾಮ! ಬರೋಬ್ಬರಿ 32 ಮಂದಿ ಪೊಲೀಸ್‌ ಬಲೆಗೆ

Fraud Case

ನೋಯ್ಡಾ: ಜನರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ವಂಚಿಸುತ್ತಿದ್ದ ನಕಲಿ ಟ್ರಾವೆಲ್ ಕಂಪನಿಯ ಶನಿವಾರ ಪೊಲೀಸರು ದಾಳಿ ನಡೆಸಿದ್ದಾರೆ. ನೋಯ್ಡಾದ (Noida) ಸೆಕ್ಟರ್ 63 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಟ್ರಾವೆಲ್‌ ಕಂಪನಿ ಲಾಭದಾಯಕ ಹಾಲಿಡೇ ಪ್ಯಾಕೇಜ್‌ ನೀಡುವುದಾಗಿ ಜನರಿಗೆ ಮೋಸ ಮಾಡುತ್ತಿತ್ತು (Fraud Case) ಎಂದು ತಿಳಿದು ಬಂದಿದೆ. ವಂಚನೆಗೆ ಸಂಬಂಧಿಸಿದಂತೆ 12 ಮಹಿಳೆಯರು ಸೇರಿದಂತೆ 32 ಜನರನ್ನು ಬಂಧಿಸಲಾಗಿದೆ.

ಕಂಟ್ರಿ ಹಾಲಿಡೇ ಟ್ರಾವೆಲ್ ಇಂಡಿಯಾ ಲಿಮಿಟೆಡ್’ ಎಂಬ ಟ್ರಾವೆಲ್‌ ಕಂಪನಿಯು ಜನರಿಗೆ ಅತ್ಯುತ್ತಮ ಹಾಲಿಡೇ ಪ್ಯಾಕೇಜ್‌ನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹಣ ಸುಲಿಗೆ ಮಾಡುತ್ತಿತ್ತು. ಜನರನ್ನು ಯಾವುದೇ ಪ್ರವಾಸಕ್ಕೆ ಕರೆದೊಯ್ಯದೇ, ಹಣವನ್ನೂ ಕೂಡ ಮರುಪಾವತಿ ಮಾಡದೆ ಗ್ರಾಹಕರಿಗೆ ಮೋಸ ಮಾಡುತ್ತಿತ್ತು. ಹಲವಾರು ಸಂತ್ರಸ್ತರು ಕಂಪನಿಯಿಂದಾಗಿ ತಮ್ಮ ಹಣವನ್ನು ಕಳೆದುಕೊಂಡಿದ್ದರು. ಹಾಗೆಯೇ ಅಮ್ರಪಾಲಿ ಈಡನ್ ಪಾರ್ಕ್ ಅಪಾರ್ಟ್‌ಮೆಂಟ್‌ನ ನಿವಾಸಿ ಅನಿತಾ ಕೂಡ ಕಂಪನಿಯನ್ನು ಸಂಪರ್ಕಿಸಿ ಒಂಬತ್ತು ದಿನಗಳ ಹಾಲಿಡೇ ಪ್ಯಾಕೇಜ್‌ಗೆ 84,000 ರೂ ಪಾವತಿ ಮಾಡಿದ್ದರು. ಆದರೆ ಕಂಪನಿ ಇವರಿಗೂ ಮೋಸ ಮಾಡಲು ಮುಂದಾಗಿದ್ದು, ಅವರು ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸರು ಐದು ಆನ್‌ಲೈನ್‌ ದೂರು ಹಾಗೂ ಒಂದು ಲಿಖಿತ ದೂರಿನ ಆಧಾರದಲ್ಲಿ ತನಿಖೆಯಲ್ಲಿ ಪ್ರಾರಂಭಿಸಿದ್ದರು. ತನಿಖೆಯಲ್ಲಿ ಕೆಲ ಸಂತ್ರಸ್ತರು 2 ಲಕ್ಷ ರೂ. ಗೂ ಅಧಿಕ ಮೊತ್ತವನ್ನು ಕಳೆದುಕೊಂಡ ವಿಚಾರ ಬಹಿರಂಗಗೊಂಡಿದೆ.

ಈ ಬಗ್ಗೆ ಮಾತನಾಡಿರುವ ನೋಯ್ಡಾ ಸೆಂಟ್ರಲ್‌ನ ಡಿಸಿಪಿ ಶಕ್ತಿ ಮೋಹನ್ ಅವಸ್ತಿ ಈ ಕಂಪನಿಯು ಸುಮಾರು ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ವರೆಗೆ ಹಲವಾರು ಜನರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ. ಆರೋಪಿಗಳು ಗ್ರಾಹಕರಿಂದ ಹಣ ಪಾವತಿಸಿಕೊಂಡು ನಂತರ ಯಾವುದೇ ಪ್ರವಾಸ ಏರ್ಪಡಿಸದೆ, ಹಣವನ್ನು ಮರುಪಾವತಿಸದೆ ವಂಚನೆ ನಡೆಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Viral Video: ಇರಾನ್‍ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ? ಭಾರತೀಯ ಟ್ರಾವೆಲ್ ವ್ಲಾಗರ್‌ ಹೇಳಿದ್ದೇನು? ಈ ವಿಡಿಯೊ ಫುಲ್‌ ವೈರಲ್‌