ಹೈದರಾಬಾದ್: ತೆಲಂಗಾಣ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ವಿರೋಧಿಸಿ ತೆಲಂಗಾಣದಲ್ಲಿ ಆಟೋ ಚಾಲಕರು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಹತ್ತಿ ಪ್ರಯಾಣಿಕರಿಂದ ಭಿಕ್ಷೆ ಕೇಳಿ, ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಸರ್ಕಾರ ರಚಿಸಿರುವ ಕಾಂಗ್ರೆಸ್, ಅಲ್ಲಿನ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಮಹಾಲಕ್ಷ್ಮೀ ಯೋಜನೆ ಘೋಷಿಸಿದೆ. ಇದರಿಂದ ಖಾಸಗಿ ಬಸ್‌ಗಳಿಗೆ, ಆಟೋ ರೀಕ್ಷಾ ಚಾಲಕರಿಗೆ ಭಾರೀ ಹೊಡೆತ ಬಿದ್ದಿದೆ. ಸರ್ಕಾರದ ಈ ಯೋಜನೆಯಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಆಟೋ ಚಾಲಕರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ಮಹಾಲಕ್ಷ್ಮಿ ಯೋಜನೆಯನ್ನು ವಿರೋಧಿಸಿ ಆಟೋ ಚಾಲಕರು ತಮ್ಮ ಸಮವಸ್ತ್ರ ಧರಿಸಿ ಬಸ್‌ನಲ್ಲಿದ್ದ ಪ್ರಯಾಣಿಕರಿಂದ ಬಟ್ಟಲನ್ನು ಹಿಡಿದುಕೊಂಡು ಭಿಕ್ಷೆ ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸ ಬೇಕು ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ.