Saturday, 14th December 2024

ಲಾರಿ-ಟ್ರಕ್ ಚಾಲಕರಿಗೆ ಉಚಿತ ಟೀ-ಕಾಫಿ ವಿತರಣೆ

ಭುವನೇಶ್ವರ: ಲಾರಿ ಚಾಲಕರು ರಾತ್ರಿ ವೇಳೆಯಲ್ಲಿಯೂ ವಾಹನ ಚಲಾಯಿಸುವುದರಿಂದ ನಿದ್ದೆ ಮಂಪರಿನಲ್ಲಿ ಅಪಘಾತಗಾಳುಗುವ ಸಂಭವ ಹೆಚ್ಚು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಡಿಶಾ ಸರ್ಕಾರ ಲಾರಿ-ಟ್ರಕ್ ಚಾಲಕರಿಗೆ ಉಚಿತ ಟೀ-ಕಾಫಿ ವಿತರಿಸಲು ಮುಂದಾಗಿದೆ.

ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆದ್ದಾರಿಗಳಲ್ಲಿ ಸಂಚರಿಸುವ ಲಾರಿ-ಟ್ರಕ್ ಚಾಲಕರಿಗೆ ಉಚಿತ ಟೀ-ಕಾಫಿ ವಿತರಿಸುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ಈ ಬಗ್ಗೆ ಒಡಿಶಾ ಸಾರಿಗೆ ಸಚಿವೆ ತುಕುಣಿ ಸಾಹು ಮಾಹಿತಿ ನೀಡಿದ್ದಾರೆ.

ಅಪಘಾತಗಳನ್ನು ನಿಯಂತ್ರಿಸಲು ಸಿಎಂ ನವೀನ್ ಪಟ್ನಾಯಕ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಸರಕು ಸಾಗಣೆ ವಾಹನ ಚಾಲಕರು ರಾತ್ರಿ ನಿದ್ದೆಯಿಲ್ಲದೇ ವಾಹನ ಚಲಾಯಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆಗಳಲ್ಲಿ ರುವ ಢಾಬಾ, ಹೋಟೆಲ್ ಗಳಲ್ಲಿ ಲಾರಿ ಚಾಲಕರಿಗೆ ಉಚಿತ ಚಹಾ, ಕಾಫಿ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾರಿ-ಟ್ರಕ್ ಚಾಲಕರ ಟೀ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಲಾರಿ ಚಾಲಕರು ಕೆಲ ಸಮಯ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.