Thursday, 12th December 2024

ಲಕ್ಷದ್ವೀಪದಲ್ಲಿ ಶುಕ್ರವಾರ ವಾರದ ರಜೆ ರದ್ದು

Lakshadweep

ಲಕ್ಷದ್ವೀಪ: ಲಕ್ಷದ್ವೀಪದಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯಕ್ಕೆ ಆಡಳಿತ ವ್ಯವಸ್ಥೆ ತಿಲಾಂಜಲಿ ನೀಡಿದ್ದು, ಇನ್ನು ಮುಂದೆ ಶುಕ್ರವಾರ ಶಾಲೆಗಳಿಗೆ ರಜೆ ಇರುವುದಿಲ್ಲ.

ದ್ವೀಪದಲ್ಲಿ ಶುಕ್ರವಾರದ ರಜೆ ರದ್ದುಪಡಿಸಿ. ಎಲ್ಲ ಶಾಲೆಗಳಿಗೆ ಭಾನುವಾರ ರಜೆ ನೀಡುವ ಹೊಸ ವೇಳಾಪಟ್ಟಿಯನ್ನು ಲಕ್ಷದ್ವೀಪ ಶಿಕ್ಷಣ ಇಲಾಖೆ  ಪ್ರಕಟಿಸಿದೆ. ಇದರೊಂದಿಗೆ ಧಾರ್ಮಿಕ ನೆಲೆಯಲ್ಲಿ ಶುಕ್ರವಾರ ರಜಾ ಸೌಲಭ್ಯವನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಈ ವಿಶೇಷ ಸೌಲಭ್ಯದಿಂದ ವಂಚಿತ ರಾಗಲಿದ್ದಾರೆ.

ಲಕ್ಷದ್ವೀಪದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಆರು ದಶಕಗಳ ಹಿಂದೆ ಶಾಲೆಗಳು ಆರಂಭವಾದ ದಿನದಿಂದ ಇದುವರೆಗೆ ಶುಕ್ರವಾರ ರಜಾದಿನವಾಗಿತ್ತು. ಶನಿವಾರ ಅರ್ಧ ದಿನ ಮಾತ್ರ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು ಎಂದು ಲಕ್ಷದ್ವೀಪ ಸಂಸದ ಮೊಹ್ಮದ್ ಫೈಸಲ್ ಹೇಳಿದ್ದಾರೆ.

ಸ್ಥಳೀಯ ವ್ಯವಸ್ಥೆಗೆ ಬದಲಾವಣೆಗಳನ್ನು ತರುವಾಗಿ ಸ್ಥಳೀಯ ಜನತೆಯ ಜತೆ ಚರ್ಚಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ವಿದ್ಯಾರ್ಥಿಗಳ ಮತ್ತು ಪೋಷಕರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಲಕ್ಷದ್ವೀಪ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮತ್ತು ಕೌನ್ಸಿಲರ್ ಪಿ.ಪಿ.ಅಬ್ಬಾಸ್ ಅವರು ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಸಲಹೆಗಾರರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.