Sunday, 10th November 2024

ಭಯೋತ್ಪಾದನೆಗೆ ಆರ್ಥಿಕ ಸಹಾಯ: 4 ಸರ್ಕಾರಿ ನೌಕರರ ವಜಾ

ಶ್ರೀನಗರ: ಭಯೋತ್ಪಾದನೆಗೆ ಆರ್ಥಿಕ ನೀಡಿದ ಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಆರೋಪಿ ಬಿಟ್ಟಾ ಕರಾಟೆ ಪತ್ನಿ ಸೇರಿ 4 ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.

ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಭಯೋತ್ಪಾದನಾ ಆರೋಪ ಎದುರಿಸುತ್ತಿರುವ ಬಿಟ್ಟಾ ಕರಾಟೆ ಪ್ರಸ್ತುತ ಅಧಿಕಾರಿಗಳ ವಶದಲ್ಲಿದ್ದು, ಭಯೋತ್ಪಾದನೆಗೆ ಆರ್ಥಿಕ ನೀಡಿದ ಸಹಾಯ ಪ್ರಕರಣದಲ್ಲಿ ಈತನ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರ ರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾ ಮಾಡಿದ್ದು, ಭಯೋತ್ಪಾದಕರ ಸಂಪರ್ಕಕ್ಕಾಗಿ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರೊಫೆಸರ್ ಮತ್ತು ಪೊಲೀಸ್ ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ವಜಾಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ವಿಚಾರಣೆಯಿಲ್ಲದೆ ಸೇವೆಯಿಂದ ವಜಾಗೊಳಿ ಸಲು ಸಂವಿಧಾನದ 311 (2) (ಸಿ) ವಿಧಿಯ ಅಡಿಯಲ್ಲಿ ರಚಿಸಲಾದ ಗೊತ್ತುಪಡಿಸಿದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮೂವರನ್ನು ವಜಾಗೊಳಿಸಲಾಗಿದೆ ಎನ್ನಲಾ ಗಿದೆ.

ವಜಾಗೊಂಡ ಮೂವರನ್ನು ಕಾಶ್ಮೀರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಅಲ್ತಾಫ್ ಹುಸೇನ್ ಪಂಡಿತ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ಮೊಹಮ್ಮದ್ ಮಕ್ಬೂಲ್ ಹಜಾಮ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪೇದೆ ಗುಲಾಮ್ ರಸೂಲ್ ಎಂದು ಗುರುತಿಸಲಾಗಿದೆ. ಇದಲ್ಲದೆ ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಭಯೋತ್ಪಾದನಾ ಆರೋಪ ಎದುರಿಸುತ್ತಿರುವ ಬಿಟ್ಟಾ ಕರಾಟೆ ಪತ್ನಿಯನ್ನು ಕೂಡ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ವಜಾಗೊಂಡ ಹುಸೇನ್ ಪಂಡಿತ್ ಅವರು ನಿಷೇಧಿತ ಜಮಾತ್-ಎ-ಇಸ್ಲಾಂ (JeI) ನೊಂದಿಗೆ ಸಕ್ರಿಯ ಸಂಬಂಧ ಹೊಂದಿದ್ದಾರೆ. ಆತ ಭಯೋತ್ಪಾದನಾ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಮತ್ತು 1993 ರಲ್ಲಿ ಭದ್ರತಾ ಪಡೆಗಳಿಂದ ಬಂಧಿಸುವ ಮೊದಲು ಮೂರು ವರ್ಷಗಳ ಕಾಲ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಸಕ್ರಿಯ ಭಯೋತ್ಪಾದಕನಾಗಿದ್ದ ಎನ್ನಲಾಗಿದೆ.