Wednesday, 11th December 2024

ಗೇಮ್‌ ಜೋನ್‌ ಅಗ್ನಿ ದುರಂತ: ಆರು ಮಂದಿ ವಿರುದ್ಧ ಎಫ್‌ಐಆರ್

ರಾಜ್‌ಕೋಟ್‌: ರಾಜ್‌ಕೋಟ್‌ನ ಮನರಂಜನಾ ಕೇಂದ್ರದಲ್ಲಿ (‘ಟಿಆರ್‌ಪಿ ಗೇಮ್‌ ಜೋನ್‌’) ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿ ಆರು ಮಂದಿ ಪಾಲುದಾರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನು ‘ನರಹತ್ಯೆ’ಯ ಆರೋಪದಡಿ ಬಂಧಿಸಲಾಗಿದೆ.

2023ರ ನವೆಂಬರ್‌ನಲ್ಲಿ ಸ್ಥಳೀಯ ಪೊಲೀಸರು ಮನರಂಜನಾ ಕೇಂದ್ರಕ್ಕೆ ಪರವಾನಗಿ ನೀಡಿದ್ದು, ಇದನ್ನು 2024ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಗೆ ನವೀಕರಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ.

‘ಟಿಆರ್‌ಪಿ ಗೇಮ್‌ ಜೋನ್‌’ ಮನರಂಜನಾ ಕೇಂದ್ರವು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯಿಂದ ಅನುಮತಿ ಪಡೆದಿದೆ. ಆದರೆ, ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿಲ್ಲ. ಇದು ಪ್ರಕ್ರಿಯೆ ಹಂತದಲ್ಲಿದೆಯೇ ಹೊರತು ಇನ್ನೂ ಪೂರ್ಣಗೊಂಡಿಲ್ಲ ಎಂದು ರಾಜು ಭಾರ್ಗವ ಹೇಳಿದ್ದಾರೆ.

ಶನಿವಾರ ಸಂಜೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನರಂಜನಾ ಕೇಂದ್ರದಲ್ಲಿ ಬೆಂಕಿ ನಂದಿಸಲು ಬೇಕಾದ ಸೂಕ್ತ ರೀತಿಯ ಉಪಕರಣಗಳು ಇರಲಿಲ್ಲ. ಜತೆಗೆ, ಸ್ಥಳೀಯ ಅಗ್ನಿಶಾಮಕ ಕೇಂದ್ರ ನಿರಾಕ್ಷೇಪಣಾ ಪತ್ರವನ್ನೂ (ಎನ್‌ಒಸಿ) ಪಡೆದಿಲ್ಲ. ಇದುವೇ ದುರಂತಕ್ಕೆ ಮುಖ್ಯ ಕಾರಣ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.