ಮುಂಬಯಿನ ಲಾಲ್‌ಬೌಚಾ ರಾಜಾ (Lalbaugcha Raja, Mumbai), ಹೈದರಾಬಾದ್‌ನ ಖೈರ್ತಾಬಾದ್ (Hyderabad Khairtabad Ganesh Pandal), ಪುಣೆಯ ಕಸ್ಬಾ ಗಣಪತಿ (Pune Kasba Ganpati) ಸೇರಿದಂತೆ ದೇಶದ ಆರು ಪ್ರಮುಖ ಗಣಪತಿ (Ganesh Chaturthi 2024) ಎಲ್ಲರ ಗಮನ ಸೆಳೆಯುತ್ತದೆ. ವಿವಿಧ ಆಚರಣೆಗಳನ್ನು ಅತ್ಯಂತ ವೈಭವದಿಂದ ನಡೆಸುವುದು ಮಾತ್ರವಲ್ಲದೆ ಶ್ರದ್ದಾ, ಭಕ್ತಿಯ ಪ್ರತಿಬಿಂಭವಾಗಿರುವ ಇಲ್ಲಿನ ಗಣಪತಿ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ.
ಭಾರತದಾದ್ಯಂತ ಭವ್ಯವಾಗಿ ಆಚರಿಸಲ್ಪಡುವ ಗಣೇಶನ ಚತುರ್ಥಿಯಲ್ಲಿ ಈ ಆರು ಗಣಪತಿ ಉತ್ಸವದಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಬಾರದು. ಯಾಕೆಂದರೆ ಇಲ್ಲಿನ ವಿಶೇಷತೆಗೆ ಕೆಲವು ಕಾರಣವೂ, ಹಿನ್ನಲೆಯೂ ಇದೆ.
ಮುಂಬಯಿನ ಲಾಲ್ ಬೌಚಾ ರಾಜಾ
ಮುಂಬಯಿನಲ್ಲಿರುವ ಗಣೇಶನ ಉತ್ಸವದಲ್ಲಿ ಲಾಲ್ ಬೌಚ್ ರಾಜಾ ಗಣಪತಿ ಲಾಲ್‌ಬಾಗ್ ಮಾರುಕಟ್ಟೆಯಲ್ಲಿ ಕುಳಿತು ಎಲ್ಲರ ಗಮನ ಸೆಳೆಯುತ್ತಾನೆ. ಲಕ್ಷಾಂತರ ಜನರ ನಂಬಿಕೆಯ ಪ್ರತಿಬಿಂಬವಾಗಿರುವ ಗಣಪತಿಯನ್ನು ‘ಲಾಲ್‌ಬಾಗ್‌ನ ರಾಜ’ ಎಂದು ಕರೆಯಲಾಗುತ್ತದೆ. ಇದು ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿ ರಚಿಸಲಾಗುವ 18- 20 ಅಡಿ ಎತ್ತರದ ಗಣೇಶ ವಿಗ್ರಹವು ಸಾಕಷ್ಟು ಭಕ್ತರ ಅಚಲ ಭಕ್ತಿಯ ಸಂಕೇತವಾಗಿದೆ. ಕೇವಲ ಗಣೇಶನ ದರ್ಶನಕ್ಕಾಗಿ ಭಕ್ತರು 24 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
ಹೈದರಾಬಾದ್ ನ ಖೈರ್ತಾಬಾದ್
ಹೈದರಾಬಾದ್ ನಲ್ಲಿ ಪ್ರಸಿದ್ದವಾದ ಖೈರ್ತಾಬಾದ್ ಗಣೇಶನನ್ನು ನೋಡಲು ದೂರದೂರುಗಳಿಂದ ಜನರು ಆಗಮಿಸುತ್ತಾರೆ. ನಗರದ ಅತಿದೊಡ್ಡ ಗಣೇಶ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷದ ಆಕೃತಿಯು 100 ಅಡಿ ಎತ್ತರವನ್ನು ಹೊಂದಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರಾಜಸ್ಥಾನದಿಂದ ತರಿಸುವ ಜೇಡಿಮಣ್ಣಿನಿಂದ ಇದನ್ನು ತಯಾರಿಸಲಾಗುತ್ತದೆ. ಸಾವಯವ ಬಣ್ಣಗಳಿಂದ ಗಣೇಶನನ್ನು ಚಿತ್ರಿಸಲಾಗುತ್ತದೆ.
ಪುಣೆಯ ಕಸ್ಬಾ ಗಣಪತಿ
ಪುಣೆಯ ಕಸ್ಬಾ ಗಣಪತಿಯು ಶಿವಾಜಿ ಮಹಾರಾಜರ ಕಾಲದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಶಿವಾಜಿಯ ತಾಯಿ ಜೀಜಾಮಾತಾ ಸ್ಥಾಪಿಸಿದ ಈ ದೇವಾಲಯವು ಪುಣೆಯಲ್ಲಿ ಸರ್ವಜನಿಕ ಗಣೇಶೋತ್ಸವ ಉತ್ಸವಗಳನ್ನು ಆರಂಭಿಸಿದ ಲೋಕಮಾನ್ಯ ತಿಲಕರ ಕಾಲದಿಂದಲೂ ಗಣೇಶ ಚತುರ್ಥಿಯನ್ನು ಆಚರಿಸುತ್ತಿದೆ. ಕಸ್ಬಾ ಗಣಪತಿ ವಿಗ್ರಹವು ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ ಮತ್ತು ಇದು ಅತ್ಯಂತ ಪೂಜ್ಯ ಮತ್ತು ಗೌರವಾನ್ವಿತ ಗಣೇಶ ಮೂರ್ತಿಗಳಲ್ಲಿ ಒಂದಾಗಿದೆ.
ಗೋವಾದ ಪಂಜಿಂ ಸರ್ವಜನಿಕ ಗಣೇಶ
ಗೋವಾದಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪಂಜಿಂನಲ್ಲಿರುವ ಸರ್ವಜನಿಕ ಗಣೇಶೋತ್ಸವವು ಹತ್ತು ದಿನಗಳ ಹಬ್ಬದ ಉದ್ದಕ್ಕೂ ದೈನಂದಿನ ಪೂಜೆ ಮತ್ತು ಆರತಿ ಸಮಾರಂಭಗಳನ್ನು ಒಳಗೊಂಡಿದೆ. ಗೋವಾದ ಪ್ಯಾಂಡಲ್‌ಗಳು ಮಹಾರಾಷ್ಟ್ರದಲ್ಲಿರುವಷ್ಟು ದೊಡ್ಡದಿಲ್ಲದಿದ್ದರೂ ಭಕ್ತಿ ಮತ್ತು ಉತ್ಸಾಹದಿಂದಾಗಿ ರಾಜ್ಯದ ಭಕ್ತರನ್ನು ಸೆಳೆಯುತ್ತದೆ.
ನಾಸಿಕ್ ನ ನಾಸಿಕ್ ಚಾ ರಾಜಾ
ನಾಸಿಕ್‌ನ ಗಣೇಶ ಚತುರ್ಥಿ ಆಚರಣೆಗಳಲ್ಲಿ ಎಲ್ಲರ ಗಮನ ಸೆಳೆಯುವುದು ನಾಸಿಕ್ ಚಾ ರಾಜಾ. ಇದು ಘಂಕರ್ ಲೇನ್‌ನ ಅಶೋಕ್ ಸ್ತಂಭ್ ನಲ್ಲಿ ನೆಲೆಗೊಂಡಿದೆ. ಉತ್ಸವದ ಅಂತ್ಯವನ್ನು ಸೂಚಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿ, ವಿಗ್ರಹವನ್ನು ಜಲಮೂಲದಲ್ಲಿ ಮುಳುಗಿಸುವ ಮೊದಲು ಹತ್ತು ದಿನಗಳ ಕಾಲ ಅತ್ಯಂತ ವೈಭವದಿಂದ ಪೂಜಿಸಲಾಗುತ್ತದೆ.
Ganesh Chaturthi: ಹುಬ್ಬಳ್ಳಿ ಗಣೇಶೋತ್ಸವ ಸಂಭ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಡ್ಯಾನ್ಸ್!
ಬೆಂಗಳೂರಿನ ವಿದ್ಯಾರಣ್ಯ ಯುವಕ ಸಂಘ
ಬೆಂಗಳೂರಿನಲ್ಲಿ ವಿಶೇಷವಾಗಿ ನಗರದ ದಕ್ಷಿಣ ಭಾಗದಲ್ಲಿರುವ ಶ್ರೀ ವಿದ್ಯಾರಣ್ಯ ಯುವಕ ಸಂಘವು ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸುವ ಗಣೇಶ ಉತ್ಸವವು ಅತ್ಯಂತ ವೈಭವದಿಂದ ನಡೆಸಲಾಗುತ್ತದೆ. ನಗರದ ಅತ್ಯಂತ ಹಳೆಯ ಸಾರ್ವಜನಿಕ ಗಣೇಶ ಇದಾಗಿದೆ. ಸುಮಾರು ಐದು ದಶಕಗಳಿಂದ ಇಲ್ಲಿ ಅತ್ಯಂತ ವೈಭವದಿಂದ ಗಣೇಶೋತ್ಸವವನ್ನು ಆಚರಿಯಿಸಲಾಗುತ್ತಿದೆ. ಈ ಉತ್ಸವವು ಸಂಗೀತ, ನೃತ್ಯ, ರಂಗಭೂಮಿ ಮತ್ತು ಕಲೆಯ ಸೊಗಸಾದ ಪ್ರದರ್ಶನಗಳ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುತ್ತದೆ.