ನವದೆಹಲಿ: ಉದ್ಯೋಗ ಅವಕಾಶಗಳನ್ನು, ಕೈಗಾರಿಕೆಗಳ ಉತ್ಪಾದಕತೆ ಹೆಚ್ಚಿಸುವ ಸಲುವಾಗಿ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ‘ಗತಿಶಕ್ತಿ’ಯನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.
‘ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಯೋಜನೆಯನ್ನು ದೇಶವು ಶೀಘ್ರದಲ್ಲಿಯೇ ಜಾರಿಗೊಳಿಸಲಿದೆ’ ಎಂದು ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಹೇಳಿದರು. ಈ ಯೋಜನೆಯ ಅಡಿಯಲ್ಲಿ ₹ 100 ಲಕ್ಷ ಕೋಟಿ ವೆಚ್ಚ ಮಾಡುವ ಗುರಿ ಇರುವುದಾಗಿ ತಿಳಿಸಿದರು. ಯೋಜನೆಯು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದರು.
‘ಗತಿಶಕ್ತಿ’ಯು ಇಡೀ ದೇಶದಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕುವ ಮಹಾಯೋಜನೆ. ಇದು ಅರ್ಥ ವ್ಯವಸ್ಥೆಗೆ ಸಮಗ್ರ, ಎಲ್ಲವನ್ನೂ ಒಳಗೊಳ್ಳುವ ಪಥವೊಂದನ್ನು ಹಾಕಿಕೊಡುತ್ತದೆ ಎಂದು ಹೇಳಿದರು.
‘ಗತಿಶಕ್ತಿ ಯೋಜನೆಯು ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ, ಕೈಗಾರಿಕೆಗಳಲ್ಲಿನ ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಶದ ತಯಾರಿಕಾ ವಲಯವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗುವಲ್ಲಿ ನೆರವಾಗಲಿದೆ’. ಅಭಿವೃದ್ಧಿಯನ್ನು ಇನ್ನಷ್ಟು ಹೆಚ್ಚಿಸಲು ದೇಶವು ತಯಾರಿಕಾ ವಲಯ ಹಾಗೂ ರಫ್ತಿನ ಮೇಲೆ ಗಮನ ನೀಡಬೇಕಿದೆ ಎಂದೂ ಪ್ರತಿಪಾದಿಸಿದರು.