Thursday, 12th December 2024

ಗತಿ ಶಕ್ತಿ ಯೋಜನೆಯು ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನೂತನ ಗತಿ ಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದ್ದಾರೆ.

ಇದರ ಅಡಿಯಲ್ಲಿ, 16 ಸಚಿವಾಲಯಗಳು ಮತ್ತು ಇಲಾಖೆಗಳು ಆ ಎಲ್ಲ ಯೋಜನೆಗಳನ್ನು ಜಿಐಎಸ್ ಮೋಡ್‌ನಲ್ಲಿ ಇರಿಸಿದ್ದು, ಇವುಗಳನ್ನು 2024-25 ರೊಳಗೆ ಪೂರ್ಣಗೊಳಿಸಲಾಗುವುದು. ಸುಮಾರು 100 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಇದು ಮೂಲಸೌಕರ್ಯದ ಅಂತಿಮ ಗಮ್ಯಸ್ಥಾನ ಸಂಪರ್ಕವನ್ನು ಸುಗಮಗೊಳಿಸಲು ಮತ್ತು ಜನರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೂಡಿಕೆದಾರ ರಿಗೆ ತಮ್ಮ ವ್ಯಾಪಾರವನ್ನು ಸೂಕ್ತ ಸ್ಥಳಗಳಲ್ಲಿ ಯೋಜಿಸಲು ಸಹಾಯ ಮಾಡಲಿದೆ.

ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ಮೂಲಕ ದೇಶದ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಲಾಗಿದೆ. ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯದ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.  ಪಿಎಂ ‘ಗತಿ ಶಕ್ತಿ’ ಬಿಡುಗಡೆ ಕಾರ್ಯಕ್ರಮವು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಿತು. ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಗತಿ ಶಕ್ತಿ ಮಾಸ್ಟರ್ ಪ್ಲಾನ್ ಮತ್ತು ಪ್ರಗತಿ ಮೈದಾನದಲ್ಲಿ ಹೊಸ ಪ್ರದರ್ಶನ ಸಂಕೀರ್ಣದ ಮಾದರಿಯನ್ನು ಪರಿಶೀಲಿಸಿದರು.

ಮುಂದಿನ 25 ವರ್ಷಗಳಿಗೆ ನಾವು ಅಡಿಪಾಯ ಹಾಕುತ್ತಿದ್ದೇವೆ. ಈ ಪ್ಲಾನ್ 21 ನೇ ಶತಮಾನದ ಅಭಿವೃದ್ಧಿ ಯೋಜನೆಗಳಿಗೆ ‘ಗತಿಶಕ್ತಿ’ ನೀಡುತ್ತದೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ಹೇಳಿದರು. ಯೋಜನೆಯು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ್’ ದೃಷ್ಟಿಕೋನದ ಒಂದು ಪ್ರಮುಖ ಭಾಗವಾಗಿದೆ.

ಯೋಜನೆಯ ವಿಶೇಷತೆ: ಪಿಎಂ ಗತಿ ಶಕ್ತಿ ಯೋಜನೆ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು.

ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಾಗುವುದು.

ಯೋಜನೆಯ ಒಟ್ಟು ಬಜೆಟ್ ಅನ್ನು 100 ಲಕ್ಷ ಕೋಟಿಗಳಿಗೆ ನಿಗದಿಪಡಿಸಲಾಗಿದೆ.

ಯೋಜನೆಯ ಮೂಲಕ ಸಮಗ್ರ ಮೂಲಸೌಕರ್ಯದ ಅಡಿಪಾಯವನ್ನು ಹಾಕಲಾಗುವುದು.