Thursday, 21st November 2024

Gautam Adani: ಅಮೆರಿಕದ ಪ್ರಾಸಿಕ್ಯೂಶನ್‌ನ ಆರೋಪ ಆಧಾರರಹಿತ ಎಂದ ಅದಾನಿ ಗ್ರೂಪ್‌; ಸ್ಪಷ್ಟನೆಯಲ್ಲಿ ಏನಿದೆ?

Gautam Adani

ವಾಷಿಂಗ್ಟನ್‌: ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರ ವಿರುದ್ಧ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣಕ್ಕೆ (Multibillion-dollar bribery and fraud scheme) ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯ ಬಗ್ಗೆ ಸ್ಪಷ್ಟನೆ ನೀಡಿದ ಅದಾನಿ ಗ್ರೂಪ್ ಇದು ಆಧಾರ ರಹಿತ ಆರೋಪ ಎಂದು ಪ್ರತಿಕ್ರಿಯೆ ನೀಡಿದೆ.

ಈ ಬಗ್ಗೆ ಹೇಳಿಕೆ ನೀಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಪ್ರಮುಖ ಕಾರ್ಯನಿರ್ವಾಹಕರ ವಿರುದ್ಧ ಅಮೆರಿಕ ಪ್ರಾಸಿಕ್ಯೂಟರ್‌ಗಳು ಮಾಡಿದ್ದ ಲಂಚ ಮತ್ತು ವಂಚನೆಯ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ಯಾವುದೇ ಆಧಾರವಿಲ್ಲದೆ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಅಮೆರಿಕದ ನ್ಯಾಯಾಂಗ ವ್ಯವಸ್ಥೆಯೇ ಹೇಳಿರುವಂತೆ, ದೋಷಾರೋಪ ಪಟ್ಟಿಯಲ್ಲಿರುವ ಆರೋಪಗಳು ಕೇವಲ ಆರೋಪಗಳಾಗಿವೆ ಮತ್ತು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳನ್ನು ನಿರಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಸಂಭಾವ್ಯ ಎಲ್ಲ ಕಾನೂನು ಸಲಹೆಗಳನ್ನು ಪಡೆದು ಮುಂದುವರಿಯುತ್ತೇವೆ ಎಂದು ಅದಾನಿ ಗ್ರೂಪ್ ವಕ್ತಾರರು ತಿಳಿಸಿದ್ದಾರೆ.

ಅದಾನಿ ಗ್ರೂಪ್ ಯಾವಾಗಲೂ ಆಡಳಿತ, ಪಾರದರ್ಶಕತೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತದೆ. ನಾವು ನಮ್ಮ ಪಾಲುದಾರರು, ಮತ್ತು ಉದ್ಯೋಗಿಗಳಿಗೆ ನಾವು ಕಾನೂನನ್ನು ಪಾಲಿಸುವಂತೆ ಸೂಚಿಸುತ್ತೇವೆ. ಯಾವುದೇ ರೀತಿಯ ಅವ್ಯವಹಾರಗಳನ್ನು ಹಾಗೂ ಅಕ್ರಮವನ್ನ ಎಸಗಲು ಬಿಡುವುದಿಲ್ಲ ಎಂದು ವಕ್ತಾರರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅದಾನಿ ಗ್ರೂಪ್ಸ್‌ ಮೇಲೆ ಆರೋಪ ಬಂದ ಬೆನ್ನಲ್ಲೇ ಗುರುವಾರದ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು 23%ರಷ್ಟು ಕುಸಿತ ಕಂಡಿದೆ. ಈ ಹಿಂದೆಯೂ ಅದಾನಿ ಗ್ರೂಪ್‌ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಹಿಂಡನ್‌ಬರ್ಗ್‌ ಕಂಪೆನಿಯು ಅದಾನಿ ಗ್ರೂಪ್‌ ಮೇಲೆ ಅವ್ಯವಹಾರದ ಆರೋಪವನ್ನು ಹೊರಿಸಿತ್ತು. ಆಗ ಕಂಪೆನಿಯ ಮಾರುಕಟ್ಟೆ ಬಂಡವಾಳೀಕರಣ 2 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಕುಸಿದಿತ್ತು.

ಏನಿದು ಪ್ರಕರಣ ?

ಅದಾನಿ ಹಾಗೂ ಇತರ ಏಳು ಮಂದಿ ಉದ್ಯಮಿಗಳು ಸೌರ ಶಕ್ತಿ ಯೋಜನೆಯ ಗುತ್ತಿಗೆಗಳನ್ನು ಪಡೆಯಲು ಭಾರತ ಸರ್ಕಾರದ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ (1,640 ಕೋಟಿ ರೂ.) ಲಂಚ ನೀಡುವ ಭರವಸೆ ಕೊಟ್ಟಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದರು. ಆರೋಪಿಗಳಲ್ಲಿ ಗೌತಮ್ ಅದಾನಿ ಅವರ ಸೋದರ ಸಂಬಂಧಿ ಸಾಗರ್ ಅದಾನಿ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಸೌರ ಯೋಜನೆಯನ್ನು ಮುಂದುವರಿಸುವ ಸಲುವಾಗಿ ಸಲುವಾಗಿ ಖುದ್ದು ಅದಾನಿಯವರೇ ಭಾರತ ಸರ್ಕಾರದ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು, ಹಾಗೂ ಲಂಚ ಕೊಡುವುದಾಗಿ ಫೋನ್‌ ಮೂಲಕ ಮಾತನಾಡಿದ್ದರು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : Gautam Adani : 1640 ಕೋಟಿ ರೂ. ಲಂಚ ಪ್ರಕರಣ- ಗೌತಮ್ ಅದಾನಿಗೆ ವಿರುದ್ಧ ಅಮೆರಿಕದಲ್ಲಿ ದೋಷಾರೋಪ