Sunday, 24th November 2024

Gautam Adani: ಅದಾನಿಗೆ ಮತ್ತೊಂದು ಸಂಕಷ್ಟ; ಅಮೆರಿಕದ ಎಸ್‌ಇಸಿ ನೋಟೀಸ್:‌ “ಉತ್ತರಿಸದೆ ಹೋದಲ್ಲಿ….”

ನ್ಯೂಯಾರ್ಕ್‌: ಸೌರಶಕ್ತಿ ಖರೀದಿ (Solar power) ಡೀಲ್ ಕುದುರಿಸಲು ಅದಾನಿ ಸಮೂಹ (Adani group) ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿತ್ತು ಎಂಬ ಆರೋಪದ ಪ್ರಕರಣದಲ್ಲಿ ಗೌತಮ್‌ ಅದಾನಿ (Gautam Adani) ಹಾಗೂ ಸೋದರಳಿಯ ಸಾಗರ್ ಅದಾನಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮೀಷನ್ (ಎಸ್‌ಇಸಿ), ಗೌತಮ್ ಅದಾನಿ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದೆ. ಈ ನೋಟೀಸ್‌ಗೆ ಉತ್ತರಿಸದೆ ಹೋದರೆ ನಿಮ್ಮ ವಿರುದ್ಧ ತೀರ್ಪು ನೀಡಲಾಗುವುದು ಎಂದು ಎಚ್ಚರಿಸಿದೆ.

2 ದಿನಗಳ ಹಿಂದಷ್ಟೇ ಅಮೆರಿಕದ ನ್ಯಾಯಾಂಗ ಇಲಾಖೆ ಇದೇ ಪ್ರಕರಣದಲ್ಲಿ ಗೌತಮ್ ಅದಾನಿ ಸೇರಿ 7 ಜನರ ವಿರುದ್ಧ ಲಂಚದ ದೋಷಾರೋಪ ಹೊರಿಸಿತ್ತು. ಅದರ ಬೆನ್ನಲ್ಲೇ ಅಮೆರಿಕದ ಷೇರುಪೇಟೆ ನಿಯಂತ್ರಣಾ ಸಂಸ್ಥೆ ಕೂಡಾ ಅದಾನಿ ಸಮೂಹಕ್ಕೆ ನೋಟಿಸ್ ಜಾರಿ ಮಾಡಿದೆ. ಅಹಮದಾಬಾದ್‌ನಲ್ಲಿರುವ ಅದಾನಿ ನಿವಾಸಕ್ಕೆ ರವಾನಿಸಲಾದ ನೋಟಿಸ್‌ನಲ್ಲಿ, ‘ನೋಟಿಸ್‌ ತಲುಪಿದ 21 ದಿನಗಳಲ್ಲಿ ನಿಮ್ಮ ಮೇಲೆ ದೂರುದಾರರು ಹೊರಿಸಿದ ಆರೋಪಗಳ ಕುರಿತು ಸ್ಪಷ್ಟನೆ ನೀಡಬೇಕು. ಒಂದು ವೇಳೆ ಪ್ರತಿಕ್ರಿಯೆ ನೀಡಲು ವಿಫಲರಾದಲ್ಲಿ ದೂರುದಾರರು ನಿಮ್ಮಿಂದ ಕೇಳಿರುವ ಪರಿಹಾರದ ಪ್ರಕರಣದಲ್ಲಿ ನಿಮ್ಮ ವಿರುದ್ದ ತೀರ್ಪು ನೀಡಲಾಗುವುದು’ ಎಚ್ಚರಿಸಲಾಗಿದೆ.

ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ನಿರ್ದೇಶಕರಾದ ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಏಳು ಮಂದಿ ಇತರರ ವಿರುದ್ಧ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು USD 265 ಮಿಲಿಯನ್ ಲಂಚ ನೀಡಿದ ಆರೋಪವಿದೆ. ಬುಧವಾರದಂದು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಮಾಡಿದ ದೋಷಾರೋಪಣೆಯ ಪ್ರಕಾರ, 20 ವರ್ಷಗಳಲ್ಲಿ USD 2 ಶತಕೋಟಿ ಲಾಭವನ್ನು ಗಳಿಸುವ ನಿರೀಕ್ಷೆಯ ಒಪ್ಪಂದಗಳನ್ನು ಪಡೆಯಲು 2020 ಮತ್ತು 2024 ರ ನಡುವೆ ಲಂಚವನ್ನು ಪಾವತಿಸಲಾಗಿದೆ.

ಆದರೆ ಈ ಆರೋಪವನ್ನು ಅದಾನಿ ಗ್ರೂಪ್‌ ನಿರಾಕರಿಸಿದೆ. ಷೇರುಪೇಟೆಯಲ್ಲಿ ನೊಂದಾಯಿತವಾಗಿರುವ ಅದಾನಿ ಸಮೂಹದ 11 ಕಂಪನಿಗಳ ಪೈಕಿ ಯಾವುದೇ ಕಂಪನಿಗಳ ಮೇಲೂ ಅಕ್ರಮದ ಆರೋಪ ಹೊರಿಸಿಲ್ಲ ಎಂದು ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ರೋಬಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸಮೂಹದ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ನಮ್ಮ ಕಾನೂನು ತಂಡದ ಅನುಮೋದನೆ ಬಳಿಕ ಸುದೀರ್ಘ ಸ್ಪಷ್ಟನೆ ನೀಡಲಾಗುವುದು’ ಎಂದು ಹೇಳಿದ್ದಾರೆ.