Thursday, 21st November 2024

Gautam Adani : 1640 ಕೋಟಿ ರೂ. ಲಂಚ ಪ್ರಕರಣ- ಗೌತಮ್ ಅದಾನಿಗೆ ವಿರುದ್ಧ ಅಮೆರಿಕದಲ್ಲಿ ದೋಷಾರೋಪ

Gautam Adani

ನ್ಯೂಯಾರ್ಕ್‌ : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರ ವಿರುದ್ಧ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣದಲ್ಲಿ (multibillion-dollar bribery and fraud scheme) ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಮೆರಿಕದಲ್ಲಿರುವ ತಮ್ಮ ಕಂಪನಿಯೊಂದಕ್ಕೆ ಗುತ್ತಿಗೆ ಪಡೆಯಲು 250 ಮಿಲಿಯನ್ ಡಾಲರ್ (1640 ಕೋಟಿ ರೂ.) ಲಂಚ ನೀಡಿ ವಿಷಯವನ್ನು ಮರೆಮಾಚಿದ್ದಾರೆ ಎಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಬುಧವಾರ ಆರೋಪಿಸಿದ್ದಾರೆ.

ಅದಾನಿ ಹಾಗೂ ಇತರೆ ಏಳು ಮಂದಿ ಉದ್ಯಮಿಗಳು ಸೌರ ಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತ ಸರ್ಕಾರದ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ (1640 ಕೋಟಿ ರೂ.) ಲಂಚ ನೀಡುವ ಭರವಸೆ ಕೊಟ್ಟಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಆರೋಪಿಗಳಲ್ಲಿ ಗೌತಮ್ ಅದಾನಿ ಅವರ ಸೋದರ ಸಂಬಂಧಿ ಸಾಗರ್ ಅದಾನಿ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಈ ಲಂಚದ ಹಣವು ಹೂಡಿಕೆದಾರರು ಹಾಗೂ ಬ್ಯಾಂಕುಗಳಿಗೆ ಸುಳ್ಳು ಮಾಹಿತಿ ನೀಡಿ, ಕೋಟ್ಯಂತರ ಡಾಲರ್ ಸಂಗ್ರಹಿಸುವುದು ಮತ್ತು ನ್ಯಾಯಾಂಗ ಕಣ್ಣಿಗೆ ಮಣ್ಣೆರಚುವ ಉದ್ದೇಶ ಹೊಂದಿತ್ತು ಎಂದು ಉಪ ಸಹಾಯಕ ಅಟಾರ್ನಿ ಲಿಸಾ ಮಿಲ್ಲರ್ ತಿಳಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಅದಾನಿಯವರ ಹೆಸರಿನ ಬದಲು ನ್ಯೂಮೆರೋ ಯುನೋ ಮತ್ತು ದೊಡ್ಡ ಮನುಷ್ಯ ಎಂದು ಉಲ್ಲೇಖ ಮಾಡಲಾಗಿದೆ. ಎಲ್ಲಿಯೂ ಗೌತಮ್‌ ಅದಾನಿ ಎಂದು ಉಲ್ಲೇಖಿಸಿಲ್ಲ. ಸದ್ಯ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಅದಾನಿಯಾಗಲಿ, ಅಥವಾ ಅದಾನಿ ಸಂಸ್ಥೆಯಾಗಲಿ ಉತ್ತರಿಸಿಲ್ಲ.

ಸೌರ ಯೋಜನೆಯನ್ನು ಮುಂದುವರಿಸುವ ಸಲುವಾಗಿ ಸಲುವಾಗಿ ಖುದ್ದು ಅದಾನಿಯವರೇ ಭಾರತ ಸರ್ಕಾರದ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು, ಹಾಗೂ ಲಂಚ ಯೋಜನೆಯನ್ನು ಫೋನ್‌ ಮೂಲಕ ಮಾತನಾಡಿದ್ದರು ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. 2023 ರಲ್ಲಿ ಹಿಂಡ್‌ಬರ್ಗ್‌ ಕಂಪನಿಯು ಅದಾನಿ ವಿರುದ್ಧ ವಂಚನೆಯ ಆರೋಪಗಳನ್ನು ಮಾಡಿತ್ತು. ಆ ಘಟನೆಯ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು.

ಇದನ್ನೂ ಓದಿ : ಫೋರ್ಬ್ಸ್‌ 37ನೇ ವಾರ್ಷಿಕ ಬಿಲಿಯನೇರ್‌ಗಳ ಪಟ್ಟಿ: ಮುಕೇಶ್‌ ಅಂಬಾನಿಗೆ 9ನೇ ಸ್ಥಾನ

ಅದಾನಿ ಗ್ರೂಪ್‌ನ ಒಡೆಯನಾಗಿರುವ 62 ವರ್ಷದ ಗೌತಮ್‌ ಅದಾನಿ ವಿಶ್ವದ 22 ನೇ ಶ್ರೀಮಂತ ಹಾಗೂ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. 1988 ರಲ್ಲಿ ಅದಾನಿ ಗ್ರೂಪ್ ಅನ್ನು ಸರಕುಗಳ ವ್ಯಾಪಾರ ಸಂಸ್ಥೆಯಾಗಿ ಸ್ಥಾಪಿಸಿದ ಅವರು ವಿಮಾನ ನಿಲ್ದಾಣಗಳು, ಬಂದರು, ವಿದ್ಯುತ್ ಉತ್ಪಾದನೆ, ಶಕ್ತಿ ಪ್ರಸರಣ ಮತ್ತು ಗಣಿಗಾರಿಕೆ ಕಂಪನಿಗಳನ್ನು ಒಳಗೊಂಡ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.