ನವದೆಹಲಿ: ಇಲ್ಲೊಬ್ಬ ವ್ಯಕ್ತಿ ದೇವರನ್ನೇ ಆಸ್ತಿ ವಿವಾದದಲ್ಲಿ ಕಕ್ಷಿದಾರನನ್ನಾಗಿ ಮಾಡಿಕೊಂಡು ಸುದ್ದಿಯಾಗಿದ್ದಾನೆ.
ವ್ಯಕ್ತಿಯೊಬ್ಬರು ಜಮೀನಿನಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನಕ್ಕೆ ಸಂಬಂಧಿಸಿದ ಭೂ ವಿವಾದದಲ್ಲಿ ಹನುಮಂತ ದೇವರನ್ನೇ ತನ್ನ ಸಹ ವ್ಯಾಜ್ಯವನ್ನಾಗಿ ಮಾಡಿಕೊಂಡಿದ್ದನು. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು.
ದೇವಸ್ಥಾನವನ್ನು ಹೊಂದಿರುವ ಖಾಸಗಿ ಜಮೀನಿನ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿಗೆ ದೆಹಲಿ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. 31 ವರ್ಷದ ಅಂಕಿತ್ ಮಿಶ್ರಾ ಅವರ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ, ₹1 ಲಕ್ಷ ದಂಡವನ್ನು ಆಸ್ತಿಯ ಮಾಲೀಕ ಸೂರಜ್ ಮಲಿಕ್‌ಗೆ ಪಾವತಿಸಲು ಆದೇಶಿಸಿದೆ.
ತೀರ್ಪಿನ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಸಿ ಹರಿಶಂಕರ್, “ದೇವರು ಮುಂದೊಂದು ದಿನ ನನ್ನ ಮುಂದೆ ದಾವೆಗಾರನಾಗುತ್ತಾನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು 51 ಪುಟಗಳ ತೀರ್ಪಿನಲ್ಲಿ ಹೇಳಿದ್ದಾರೆ.
ಸೂರಜ್ ಮಲಿಕ್ ಒಡೆತನದ ಖಾಸಗಿ ಜಮೀನಿನಲ್ಲಿ ದೇವಸ್ಥಾನವಿದೆ ಎಂದು ದೃಢಪಡಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ 31 ವರ್ಷದ ಅಂಕಿತ್ ಮಿಶ್ರಾ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು.
ಹನುಮಂತ ದೇವರಿಗೆ ಸಮರ್ಪಿತವಾದ ಆಸ್ತಿಯಲ್ಲಿ ಸಾರ್ವಜನಿಕ ದೇವಾಲಯ ಇರುವುದರಿಂದ ಆ ಭೂಮಿ ಹನುಮಂತ ದೇವರಿಗೆ ಸೇರಿದ್ದು, ಈ ಭೂಮಿ ಯು ಸಾರ್ವಜನಿಕ ದೇವಸ್ಥಾನ ಆಗಿ ಮಾರ್ಪಟ್ಟಿದೆ. ಇದರಿಂದಾಗಿ ಅಲ್ಲಿ ಸಾರ್ವಜನಿಕ ಪೂಜೆಯಿಂದಾಗಿ ಮಲಿಕ್ ಅವರ ಮಾಲೀಕತ್ವದ ಹಕ್ಕುಗಳನ್ನು ರದ್ದುಗೊಳಿಸಬೇಕು ಎಂದು ಆಕ್ಷೇಪಣೆಯನ್ನು ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ ನ್ಯಾಯಾಲಯ ಮಾತ್ರ, ದೇವಾಲಯಕ್ಕೆ ಸಾಂದರ್ಭಿಕ ಸಾರ್ವಜನಿಕ ಪ್ರವೇಶವನ್ನು ಅನುಮತಿಸುವುದರಿಂದ ಅದರ ಹಿಂದಿನ ಖಾಸಗಿ ಸ್ವರೂಪವನ್ನು ಬದಲಾಯಿಸಲಾಗುವುದಿಲ್ಲ. ಅಲ್ಲಿ ದೇವಸ್ಥಾನ ಇದ್ದ ಮಾತ್ರಕ್ಕೆ ಭೂಮಾಲೀಕರ ಹಕ್ಕುಗಳನ್ನು ದುರ್ಬಲಗೊಳಿಸುವುದಿಲ್ಲ ಎಂದು ಕೆಳ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.