ಹಬ್ಬವೆಂದಾಗ ಅದರಲ್ಲೂ ದೀಪಾವಳಿ ಹಬ್ಬ ಬಂದಾಗ ಚಿನ್ನ (Gold Rate), ಬೆಳ್ಳಿಯ (Silver Rate) ನೆನಪಾಗುತ್ತದೆ. ಆದರೆ ಈಗ ಇದು ದಿನೇದಿನೇ ದುಬಾರಿಯಾಗುತ್ತ ಸಾಗುತ್ತಿದೆ. ಹಾಗಂತ ಹೂಡಿಕೆ (Investment) ಬಗ್ಗೆ ಯೋಚನೆ ಮಾಡಬಾರದು ಏನಿಲ್ಲ. ಯಾಕೆಂದರೆ ಇವತ್ತು ನೀವು ಮಾಡುವ ಸಣ್ಣ ಹೂಡಿಕೆ ಮುಂದೊಂದು ದಿನ ದೊಡ್ಡ ಲಾಭವನ್ನು ತಂದುಕೊಡುತ್ತದೆ.
ಕಳೆದ ಐದು ವರ್ಷಗಳಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಚಿನ್ನದ ಮೇಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತ ಎಂದೇ ಪರಿಗಣಿಸಲಾಗುತ್ತಿದೆ.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ (MOFSL) ಇತ್ತೀಚಿನ ಅಧ್ಯಯನದ ಪ್ರಕಾರ ದೀಪಾವಳಿ 2019ರ ಸಮಯದಲ್ಲಿ ಒಂದು ವೇಳೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಈಗ ಶೇ. 103ರಷ್ಟು ಆದಾಯ ಪಡೆಯಬಹುದಿತ್ತು. ಇದು ಮುಂದಿನ 12- 15 ತಿಂಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.
ಎಂಒಎಫ್‌ಎಸ್‌ಎಲ್ ಪ್ರಕಾರ ಬೆಳ್ಳಿಯ ಕೂಡ ಈಗ ಹೂಡಿಕೆಗೆ ಯೋಗ್ಯವಾಗಿದೆ. ಪ್ರಸ್ತುತ ಬೆಳ್ಳಿ ಮೌಲ್ಯ ಪ್ರತಿ ಕೆ.ಜಿ.ಗೆ 1.25 ಲಕ್ಷ ರೂ. ಆಗಿದ್ದು, ಇದು 2025ರ ಅಂತ್ಯದ ವೇಳೆಗೆ 28 ಗ್ರಾಮ್ ಬೆಳ್ಳಿ ಬೆಲೆ 3,363 ರೂ. ತಲುಪುವ ನಿರೀಕ್ಷೆಯಿದೆ. ಬೆಳ್ಳಿ ಬೆಲೆಯು ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಇನ್ನು ಚಿನ್ನ 10 ಗ್ರಾಂ ಗೆ 81,000 ರೂ. ದಾಟಿದ್ದು, ಮುಂದಿನ ವರ್ಷದಲ್ಲಿ 86,000 ರೂ. ತಲುಪುವ ನಿರೀಕ್ಷೆ ಇದೆ.
ದೀಪಾವಳಿ ಮತ್ತು ಚಿನ್ನ
ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತದೆ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಜನರು ಚಿನ್ನ ಖರೀದಿಸಲು ಆಸಕ್ತರಾಗಿರುತ್ತಾರೆ. ಈ ವೇಳೆ ಚಿನ್ನ ಕೊಂಚ ದುಬಾರಿಯಾಗುವುದು ಸಾಮಾನ್ಯ. ಎಂಒಎಫ್ ಎಸ್ ಎಲ್ ಪ್ರಕಾರ 2016ರ ಬಳಿಕ ಚಿನ್ನ ಲಾಭದ ಹಾದಿಯನ್ನು ತೋರಿಸುತ್ತಿದೆ.
ಚಿನ್ನ, ಬೆಳ್ಳಿಗೆ 2024 ಗಮನಾರ್ಹ ವರ್ಷವಾಗಿದೆ. ವಿವಿಧ ಕಾರಣಗಳಿಂದ ಉಂಟಾಗುತ್ತಿರುವ ಹಣದುಬ್ಬರ, ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಪರಿಣಾಮ ಚಿನ್ನ, ಬೆಳ್ಳಿ ದರಗಳು ಏರಿಕೆಯ ಹಾದಿಯಲ್ಲೇ ಮುನ್ನಡೆಯುತ್ತಿದೆ.
ಎಂಒಎಫ್‌ಎಸ್‌ಎಲ್ ವಿಶ್ಲೇಷಕ ಮಾನವ್ ಮೋದಿ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ರೂಪಾಯಿ ಮೌಲ್ಯದ ಕುಸಿತದಿಂದ ಹೆಚ್ಚಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯ ಅನಂತರ ಇದು ಕೊಂಚ ಸ್ಥಿರತೆಯ ಹಾದಿಯಲ್ಲಿ ಮುನ್ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅಶಾಂತಿ, ಜಾಗತಿಕ ಅನಿಶ್ಚಿತತೆಗಳು, ನಿರೀಕ್ಷಿತ ದರ ಕಡಿತದ ನಿರೀಕ್ಷೆ ಚಿನ್ನ ಮತ್ತು ಬೆಳ್ಳಿ ದರದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.
ಬೆಳ್ಳಿ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ
ಚಿನ್ನವು ಸ್ಥಿರವಾದ ಹಾದಿಯಲ್ಲಿ ಮುನ್ನಡೆಯುತ್ತಿದ್ದರೂ ಕೈಗಾರಿಕಾ ವಲಯ ಮತ್ತು ಹೂಡಿಕೆದಾರರ ದ್ವಿಗುಣ ಬೇಡಿಕೆಯಿಂದಾಗಿ ಬೆಳ್ಳಿಯು ಚಿನ್ನದ ದರವನ್ನು ಮೀರಿ ಮುನ್ನುಗ್ಗುವ ಸಾಮರ್ಥ್ಯವನ್ನು ತೋರಿದೆ.
ಎಂಒಎಫ್‌ಎಸ್‌ಎಲ್‌ನ ಮುನ್ಸೂಚನೆ ಪ್ರಕಾರ ಮುಂಬರುವ ವರ್ಷದಲ್ಲಿ ಬೆಳ್ಳಿ ಚಿನ್ನಕ್ಕಿಂತ ಹೆಚ್ಚಿನ ಲಾಭವನ್ನು ತಂದುಕೊಡಲಿದೆ.
ದೀರ್ಘಾವಧಿ ಹೂಡಿಕೆಗೆ ಅವಕಾಶ
ಕೆಲವು ಸಂದರ್ಭದಲ್ಲಷ್ಟೇ ಚಿನ್ನ, ಬೆಳ್ಳಿ ಬೆಲೆ ಚಂಚಲತೆಯನ್ನು ತೋರಿದ್ದರೂ ದೀರ್ಘಾವಧಿಯ ಹೂಡಿಕೆಗೆ ಇದು ಧನಾತ್ಮಕವಾಗಿಯೇ ಪ್ರತಿಕ್ರಿಯಿಸಿದೆ. ಬೆಲೆ ಕುಸಿತ, ಏರಿಕೆ ಆದರೂ ಚಿನ್ನ, ಬೆಳ್ಳಿಯ ಮೇಲಿನ ಹೂಡಿಕೆ ಪ್ರೀತಿ ಕಡಿಮೆಯಾಗಿಲ್ಲ.
Gold Price Today: ಮತ್ತೆ ಏರಿಕೆ ಕಂಡ ಚಿನ್ನದ ದರ; ಇಂದಿನ ಬೆಲೆ ಇಲ್ಲಿ ಚೆಕ್ ಮಾಡಿ
2019ರಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಈಗ ಅದರ ಬೆಲೆ ಎಷ್ಟಾಗುತ್ತಿತ್ತು?
2019ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಮೇಲೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಈಗ ಅದರ ಬೆಲೆ 2.03 ಲಕ್ಷ ರೂ. ಆಗುತ್ತಿತ್ತು. ಯಾಕೆಂದರೆ ಬಳಿಕ ಚಿನ್ನದ ಮೌಲ್ಯ ಸುಮಾರು ಶೇ. 103ಕ್ಕಿಂತಲೂ ಹೆಚ್ಚಾಗಿದೆ.