ಗೋರಖ್‌ಪುರ: ಪಂಡಿತ್ ದೀನದಯಾಳ್ ಉಪಾಧ್ಯಾಯ ಗೋರಖ್‌ಪುರ ವಿಶ್ವವಿದ್ಯಾಲಯ ದಲ್ಲಿ (ಡಿಡಿಯು) ಭ್ರಷ್ಟಾಚಾರ, ಅರಾಜಕತೆ ಮತ್ತು ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಕುಲಪತಿ ಮತ್ತು ರಿಜಿಸ್ಟ್ರಾರ್ ಅವರನ್ನು ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಥಳಿಸಿದ್ದಾರೆ. ತಡೆಯಲು ಬಂದ ಪೊಲೀಸರು ಪ್ರತಿಭಟನಾಕಾರರ ಮಧ್ಯೆ ತೀವ್ರ ಘರ್ಷಣೆ ಏರ್ಪಟ್ಟಿತು.
ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅರಾಜಕತೆ ಮತ್ತು ವಿವಿಧ ಶುಲ್ಕಗಳ ಹೆಚ್ಚಳ ವನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ವಾರದ ಹಿಂದೆ ನಡೆದ ಧರಣಿಯಲ್ಲೂ ಗಲಾಟೆ ಉಂಟಾಗಿ 6 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾ ಗಿದೆ.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸಿಟ್ಟು ಸ್ಫೋಟಗೊಂಡಿದೆ. ವಿವಿಯಲ್ಲಿ ನಡೆದ ಆಘಾತಕಾರಿ ಘಟನೆ ವಿರುದ್ಧ ದೂರು ದಾಖಲಿಸಲಾಗಿದೆ. ಕ್ಯಾಂಟ್ ಠಾಣೆ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಂಡಿದ್ದಾಗಿ ತಿಳಿದು ಬಂದಿದೆ.