ನವದೆಹಲಿ: ಎರಡಕ್ಕಿಂತ ಹೆಚ್ಚು ಮಕ್ಕಳು ಇದ್ದವರಿಗೆ ಸರ್ಕಾರಿ ಹುದ್ದೆ ಅನ್ವಯವಾಗುವುದಿಲ್ಲ ಎಂಬ ರಾಜಸ್ಥಾನ ಸರ್ಕಾರದ ಕಾನೂನಿಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ರಾಜಸ್ಥಾನದ ಹಿಂದಿನ ಸರ್ಕಾರದ ಎರಡು ಮಕ್ಕಳ ನಿಯಮಕ್ಕೆ ಸುಪ್ರೀಂ ಕೋರ್ಟ್ ತನ್ನ ಅನುಮೋದನೆಯನ್ನು ನೀಡಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗ ನೀಡಲು ನಿರಾಕರಿಸುವುದು ತಾರತಮ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರಿದ್ದ ಪೀಠವು ರಾಜಸ್ಥಾನ ಹೈಕೋರ್ಟ್ ಅಕ್ಟೋಬರ್ 12, 2022 ರಂದು ನೀಡಿದ ತೀರ್ಪನ್ನು ಎತ್ತಿಹಿಡಿದಿದ್ದಲ್ಲದೇ, ಸರ್ಕಾರವು ಈ ನಿಬಂಧನೆಯ ಮೂಲಕ ಕುಟುಂಬ ಯೋಜನೆ ಯನ್ನು ಉತ್ತೇಜಿಸಲು ಬಯಸಬಹುದು ಎಂದು ಹೇಳಿದೆ.
ಪಂಚಾಯ್ತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಗರಿಷ್ಠ ಎರಡು ಮಕ್ಕಳ ಮಾನದಂಡವನ್ನು ಎತ್ತಿ ಹಿಡಿದು 21 ವರ್ಷಗಳ ಬಳಿಕ, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕೂಡಾ ಇದೇ ಮಾನದಂಡವನ್ನು ಅನ್ವಯಿಸುವ ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಸಈ ಕಾನೂನನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್, ತೆರಿಗೆ ನೀತಿಯನ್ನು ಮಾಡಲು ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ.
ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಮಾಜಿ ಸೈನಿಕ ರಾಮ್‌ಜಿ ಲಾಲ್ ಜಾಟ್ ಅವರ ಅರ್ಜಿಯನ್ನು ತಿರಸ್ಕರಿಸಿ ಈ ನಿಯಮವು ಸಂವಿಧಾನದ ಮೂಲ ಆಶಯಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಹೀಗಾಗಿ ಜೂನ್ 01, 2002 ರಂದು ಅಥವಾ ನಂತರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಯಾವುದೇ ಅಭ್ಯರ್ಥಿ ಸರ್ಕಾರಿ ಸೇವೆಯ ನೇಮ ಕಾತಿಗೆ ಅರ್ಹರಾಗಿರುವುದಿಲ್ಲ ಎಂದು ಈ ನಿಯಮಗಳು ಹೇಳುತ್ತವೆ.