ನವದೆಹಲಿ: ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ(GST Collections) ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇಕಡಾ 9ಕ್ಕೆ ಏರಿಕೆ ಆಗಿದ್ದು, ಆರು ತಿಂಗಳ ಗರಿಷ್ಠ 1,87,346 ಕೋಟಿ ರೂಪಾಯಿಗಳಿಗೆ ಜಿಗಿದಿದೆ. ಶುಕ್ರವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ತಿಂಗಳ ಆಧಾರದ ಮೇಲೆ, ಭಾರತದ GST ಸಂಗ್ರಹಗಳು ಅಕ್ಟೋಬರ್ 2024 ರಲ್ಲಿ ಶೇಕಡಾ 8.9 ರಷ್ಟು ಏರಿಕೆಯಾಗಿದೆ.
ಕೇಂದ್ರ ಜಿಎಸ್‌ಟಿ ಸಂಗ್ರಹ 33,821 ಕೋಟಿ, ರಾಜ್ಯ ಜಿಎಸ್‌ಟಿ 41,864 ಕೋಟಿ, ಇಂಟಿಗ್ರೇಟೆಡ್ ಐಜಿಎಸ್‌ಟಿ 99,111 ಕೋಟಿ ಮತ್ತು ಸೆಸ್ 12,550 ಕೋಟಿ. ಒಟ್ಟು ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ಕಳೆದ ತಿಂಗಳು ಶೇಕಡ 8.9 ಏರಿಕೆ ಆಗಿದ್ದು, 1.87 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ಅಕ್ಟೋಬರ್ 2023 ರಲ್ಲಿ, ಈ ಪ್ರಮಾಣ 1.72 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.
ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಶೇ.10.6 ರಷ್ಟು ಏರಿಕೆಯಾಗಿ 1.42 ಲಕ್ಷ ಕೋಟಿ ರೂ.ಗೆ ತಲುಪಿದೆ. ಅಲ್ಲದೇ ಅಕ್ಟೋಬರ್ 2024ರಲ್ಲಿ ಆಮದು ಮೇಲಿನ ತೆರಿಗೆ ಶೇ.4ರಷ್ಟು ಏರಿಕೆಯಾಗಿ 45,096 ಕೋಟಿ ರೂ. ತಲುಪಿದೆ. 19,306 ಕೋಟಿ ಮೌಲ್ಯದ ಮರುಪಾವತಿಯನ್ನು ತಿಂಗಳ ಅವಧಿಯಲ್ಲಿ ನೀಡಲಾಗಿದ್ದು, ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 18.2 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಮರುಪಾವತಿಯನ್ನು ಸರಿಹೊಂದಿಸಿದ ನಂತರ, ನಿವ್ವಳ ಜಿಎಸ್ಟಿ ಸಂಗ್ರಹವು 8 ಪ್ರತಿಶತದಷ್ಟು ಬೆಳೆದು 1.68 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.
KPMG ಯ ಪರೋಕ್ಷ ತೆರಿಗೆ ಮುಖ್ಯಸ್ಥ ಮತ್ತು ಪಾಲುದಾರ ಅಭಿಷೇಕ್ ಜೈನ್ ಈ ಬಗ್ಗ ಪ್ರತಿಕ್ರಿಯಿಸಿದ್ದು, “ಜಿಎಸ್‌ಟಿ ಸಂಗ್ರಹಗಳು 1.9 ಲಕ್ಷ ಕೋಟಿಗೆ ಹತ್ತಿರದಲ್ಲಿದೆ ಮತ್ತು ದೇಶೀಯ ಪೂರೈಕೆಗಳ ಮೇಲಿನ ಜಿಎಸ್‌ಟಿ ಸಂಗ್ರಹಣೆಯಲ್ಲಿ 10% ಹೆಚ್ಚಳ ಮತ್ತು ಭಾರತೀಯ ಆರ್ಥಿಕತೆಯ ದೃಢತೆಯನ್ನು ಬಿಂಬಿಸುತ್ತದೆ. ಅಲ್ಲದೆ, ಈ ತಿಂಗಳಲ್ಲಿ ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಯಲ್ಲಿ ಗಮನಾರ್ಹ ಏರಿಕೆ ಕಾಣುತ್ತಿರುವುದು ಉತ್ತೇಜನಕಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: New GST: ರಾಜ್ಯದಲ್ಲಿ ಹೊಸ ಜಿಎಸ್‌ಟಿ ಜಟಾಪಟಿ ಶುರು
ಸೆಪ್ಟೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಅಲ್ಪ ಏರಿಕೆ ದಾಖಲಾಗಿದೆ. ಒಟ್ಟು 1.73 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6.5ರಷ್ಟು ಏರಿಕೆ ಕಂಡಿತ್ತು.