Friday, 22nd November 2024

ಜಿಎಸ್‌ಟಿ ಆದಾಯ ಸಂಗ್ರಹ: ಮೇ ತಿಂಗಳಲ್ಲಿ ಏರಿಕೆ

ನವದೆಹಲಿ: ದೇಶದ ಹಲವೆಡೆ ಲಾಕ್‌ಡೌನ್ ನಿರ್ಬಂಧಗಳ ನಡುವೆಯೂ ಮೇ ತಿಂಗಳಿನ ಜಿಎಸ್‌ಟಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿ ರೂಪಾಯಿ ಮೀರಿದೆ. ಈ ಕುರಿತು ಹಣಕಾಸು ಸಚಿವಾಲಯ ಶನಿವಾರ ಮಾಹಿತಿ ಬಿಡುಗಡೆ ಮಾಡಿದೆ.

ಮೇ ತಿಂಗಳಿನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ಮೊತ್ತ 1,02,709 ಕೋಟಿ ರೂಪಾಯಿ. ಅದರಲ್ಲಿ ಸಿಜಿಎಸ್‌ಟಿ 17,592 ಕೋಟಿ ರೂ ಆಗಿದೆ. ಎಸ್‌ಜಿಎಸ್‌ಟಿ 22,653 ಕೋಟಿ ರೂ, ಐಜಿಎಸ್‌ಟಿ 53,199 ಕೋಟಿ ರೂ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 26,002 ಕೋಟಿ ರೂ ಒಳಗೊಂಡು) ಹಾಗೂ 9,265 ಕೋಟಿ ರೂ ಸೆಸ್ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 868 ಕೋಟಿ ರೂ ಒಳ ಗೊಂಡು) ಆಗಿದೆ. ತೆರಿಗೆ ಪಾವತಿದಾರರಿಗೆ ಬಡ್ಡಿ ಕಡಿತದ ರೂಪದಲ್ಲಿ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು.

ಈ ತಿಂಗಳಿನಲ್ಲಿ ಸರ್ಕಾರ ಸಿಜಿಎಸ್‌ಟಿಗೆ 15,014 ಕೋಟಿ ರೂ. ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ 11,653 ಕೋಟಿ ರೂ. ನೀಡಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿನ ಆದಾಯಕ್ಕಿಂತ ಮೇ 2021ರಲ್ಲಿ ಶೇ. 65ರಷ್ಟು ಆದಾಯ ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ಸರಕು ಆಮದಿನ ಆದಾಯ ಶೇ 56ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಶೇ. 69ರಷ್ಟು ಆದಾಯ ಹೆಚ್ಚಾಗಿದೆ.

ಮೇ ತಿಂಗಳನ್ನು ಒಳಗೊಂಡು ಸತತ ಎಂಟನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿ ರೂಪಾಯಿಯನ್ನು ಮೀರಿದೆ.