Thursday, 19th September 2024

Gujarat Violence: ಗಣೇಶ ಪೆಂಡಾಲ್‌ ಮೇಲೆ ಕಲ್ಲು ತೂರಾಟ; 30ಕ್ಕೂ ಹೆಚ್ಚು ಜನ ಅರೆಸ್ಟ್‌- ಭಾರೀ ಗಲಭೆ, ಪೊಲೀಸರಿಂದ ಲಾಠಿಚಾರ್ಜ್‌

gujarat violence

ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿ ನಡೆಯುತ್ತಿರುವ ಗಣಪತಿ ಉತ್ಸವದ ವೇಳೆ ಅನ್ಯಕೋಮಿನ ದುಷ್ಕರ್ಮಿಗಳು ಗಣಪತಿ ಪೆಂಡಾಲ್‌ ಮೇಲೆ ಕಲ್ಲು ತೂರಾಟ(Stone Pelting) ನಡೆಸಿದ್ದಾರೆ. ಪರಿಣಾಮವಾಗಿ ಗಣೇಶನ ವಿಗ್ರಹವನ್ನು ಹಾನಿಗೊಳಿಸಲಾಗಿದೆ(Gujarat Violence). ಭಾನುವಾರ ತಡರಾತ್ರಿ ಸೈಯದ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರೀ ಘರ್ಷಣೆ ಏರ್ಪಟ್ಟಿದೆ.

ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 30ಕ್ಕೂ ಅಧಿಕ ಜನರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಬಂಧಿತರಲ್ಲಿ ಅನೇಕರು ಅಪ್ರಾಪ್ತರಾಗಿದ್ದು, ಸುಮಾರು 300 ಜನರ ಗುಂಪು ಲಾಲ್‌ಗೇಟ್ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಪೊಲೀಸ್ ವಾಹನಕ್ಕೆ ಹಾನಿಯಾಗಿದೆ. ಕೊನೆಗೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ತಿಳಿಸಿದ್ದಾರೆ.

ಈ ಘಟನೆಗಳಿಗೆ ಸಂಬಂಧಿಸಿದಂತೆ ಇದುವರೆಗೆ 32 ಜನರನ್ನು ಬಂಧಿಸಲಾಗಿದೆ ಮತ್ತು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನಗರದ ಶಾಂತಿಯನ್ನು ಕದಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಬಂಧಿಸಲಾಗುವುದು ಮತ್ತು ಯಾರನ್ನೂ ಬಿಡಲಾಗುವುದಿಲ್ಲ ಎಂದು ಸಾಂಘವಿ ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸರ ಪ್ರಕಾರ, ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಗಣೇಶ ಮಂಟಪದ ಮೇಲೆ ಕಲ್ಲು ಎಸೆದು ವಿಗ್ರಹವನ್ನು ಹಾನಿಗೊಳಿಸಿದ್ದಾರೆ. ಈ ಸಂಬಂಧ ಪೊಲೀಸರು ಕೆಲವು ಅಪ್ರಾಪ್ತರನ್ನು ವಶಕ್ಕೆ ಪಡೆದು ಲಾಲ್ಗೇಟ್ ಠಾಣೆಗೆ ಕರೆತಂದಿದ್ದಾರೆ. 200-300 ಜನರ ಗುಂಪು ಜಮಾಯಿಸಿ ತಮ್ಮ ಸಮುದಾಯದ ಕೆಲವು ಅಪ್ರಾಪ್ತರನ್ನು ಬಂಧಿಸಿದ ಬಗ್ಗೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿತು. ನಂತರ ಉಂಟಾದ ಗಲಭೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಪೊಲೀಸ್ ವಾಹನಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್