ಗಾಂಧಿನಗರ: ಗುಜರಾತ್ ವಿಧಾನಸಭೆ ಪ್ರವೇಶದ್ವಾರದ ಬಳಿ ಪ್ರತಿಭಟನೆ ಸಂದರ್ಭ ಅಂಗಿ ಕಳಚಿದ್ದ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ 15 ಶಾಸಕರು ಸದನ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಸಿದರು. ಈ ವೇಳೆ ವಿಮಲ್ ಚುಡಾಸಮ್ ಮತ್ತು ಲಲಿತ್ ವಸೋಯಾ ಎಂಬುವವರು ತಮ್ಮ ಶರ್ಟ್ ತೆಗೆದು ಪ್ರತಿಭಟಿಸಿದರು.
ಮಹಿಳಾ ಪೊಲೀಸ್ ಸಿಬ್ಬಂದಿ ಮುಂದೆಯೇ ಶರ್ಟ್ ತೆಗೆದಿರುವುದು ಅಕ್ಷಮ್ಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇದೇ ರೀತಿ ನಾವು ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ನಿಮಾಬೆನ್ ಆಚಾರ್ಯಾ, ಘಟನೆಯ ವಿಡಿಯೊ ಕ್ಲಿಪ್ ವೀಕ್ಷಿಸಿದ ಬಳಿಕ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ ನೀರಾವರಿ ಮೇಲೆ ಪರಿಣಾಮ ಬೀರಿದೆ. ತೆಂಗಿನ ಮರ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ವಿಮಲ್ ಚುಡಾಸಮ್ ತಿಳಿಸಿದರು.