Friday, 22nd November 2024

ಎರಡು ಹಂತದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ

ವದೆಹಲಿ: ಗುಜರಾತ್ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.

ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದಾರೆ. 89 ಕ್ಷೇತ್ರಗಳಿಗೆ ಡಿಸೆಂಬರ್ 1ರಂದು, ಉಳಿದ 93 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ.

ಇತ್ತೀಚೆಗೆ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟ 135 ಮಂದಿಗೆ ಮುಖ್ಯ ಆಯುಕ್ತರು ಶ್ರದ್ಧಾಂಜಲಿ ಸಲ್ಲಿಸಿ, ನಂತರ ಮಾಹಿತಿ ನೀಡುವುದನ್ನು ಮುಂದುವರೆಸಿದರು.

ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 142 ಸಾಮಾನ್ಯ ಕ್ಷೇತ್ರಗಳಾಗಿವೆ, 17 ಪರಿಶಿಷ್ಟ ಜಾತಿ, 23 ಪರಿಶಿಷ್ಟ ಪಂಗಡಕ್ಕೆ ಸೇರಿದ ಕ್ಷೇತ್ರಗಳಾಗಿವೆ. ಒಟ್ಟು 4.9 ಕೋಟಿ ಅರ್ಹ ಮತದಾರರನ್ನು ಗುರುತಿಸಲಾಗಿದೆ. ಅವರಲ್ಲಿ 4.6 ಲಕ್ಷ ಹೊಸ ಮತದಾರರಿದ್ದಾರೆ. ರಾಜ್ಯಾ ದ್ಯಂತ 51 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲಿ ಗ್ರಾಮೀಣ ಭಾಗದಲ್ಲಿ 34,276, 17506 ನಗರ ಪ್ರದೇಶದಲ್ಲಿರ ಲಿವೆ.

ಮೊದಲ ಹಂತದ ಚುನಾವಣೆಗೆ ನ.5ರಂದು ಅಸೂಚನೆ ಜಾರಿಗೆ ಬರಲಿದ್ದು, ನಾಮಪತ್ರ ಸಲ್ಲಿಕೆಗೆ ನ.14 ಕೊನೆಯ ದಿನವಾಗಿದೆ. 15ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.17 ಕೊನೆಯ ದಿನವಾಗಿದೆ. ಡಿಸೆಂಬರ್ 1ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತದ ಮತದಾನಕ್ಕೆ ನ.10ರಂದು ಅಸೂಚನೆ ಜಾರಿಯಾಗಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನ.17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 18ರಂದು ಪರಿಶೀಲನೆ ನಡೆದು, ಹಿಂಪಡೆಯಲು ನ.21ರವರೆಗೂ ಕಾಲಾವಕಾಶ ನೀಡಲಾಗುವುದು. ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಎರಡು ಹಂತದ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8ರಂದು ನಡೆದು ಫಲಿತಾಂಶ ಪ್ರಕಟವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ನೆಲವಾದ ಗುಜರಾತ್ ನಲ್ಲಿ ಸತತ ಐದು ಅವಧಿ ಯಿಂದ ಬಿಜೆಪಿ ಪಾರುಪತ್ಯ ಮುಂದುವರೆದಿದೆ.