Friday, 22nd November 2024

ಗುಜರಾತ್‌ ಮುಖ್ಯ ನ್ಯಾಯಮೂರ್ತಿಗಳಿಂದ ಕನ್ನಡ ಸಂಭಾಷಣೆ, ಕಕ್ಷಿದಾರ ಕಕ್ಕಾಬಿಕ್ಕಿ !

ಅಹಮದಾಬಾದ್: ಗುಜರಾತ್‌ ಮುಖ್ಯ ನ್ಯಾಯಮೂರ್ತಿಗಳು ಕನ್ನಡ ಭಾಷೆ ಬಳಸಿದ್ದು ಇದೀಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಇಷ್ಟೇ. ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕದವರೇ ಆಗಿರುವ ಅರವಿಂದ ಕುಮಾರ್‌ ಅವರು.

ಹೈಕೋರ್ಟ್‌ ಸೇರಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿಯೂ ಆಯಾ ರಾಜ್ಯಗಳ ಭಾಷೆಗಳನ್ನೇ ಕಡ್ಡಾಯ ಮಾಡಬೇಕು ಎಂದು ಕೆಲ ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ.

ಕೇಸೊಂದರ ವಿಚಾರಣೆ ವೇಳೆ ಕಕ್ಷಿದಾರನೊಬ್ಬರು ಖುದ್ದು ವಾದ ಮಂಡಿಸುತ್ತಿದ್ದರು. ಆ ಸಂದರ್ಭ ದಲ್ಲಿ ಆತ ಗುಜರಾತಿ ಭಾಷೆಯನ್ನು ಆಡಲು ಆರಂಭಿಸಿ ದ್ದಾರೆ. ಅದರಿಂದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು, ‘ನನಗೆ ಗುಜರಾತಿ ಭಾಷೆ ಅರ್ಥವಾಗುವುದಿಲ್ಲ. ಹೈಕೋರ್ಟ್ ನಿಯಮದಂತೆ ಇಂಗ್ಲಿಷ್‌ನಲ್ಲಿ ವಾದ ಮಂಡಿಸಿ’ ಎಂದಿದ್ದಾರೆ. ಆಗ ಕಕ್ಷಿದಾರ ‘ಇದು ಗುಜರಾತ್. ಇದೇ ಮೊದಲ ಬಾರಿಗೆ ನಾನು ಹೈಕೋರ್ಟ್​ಗೆ ಬಂದಿರುವೆ, ಗುಜರಾತಿ ಭಾಷೆಯಲ್ಲಿಯೇ ವಾದ ಮಂಡಿಸುವೆ’ ಎಂದರು.

ಬೇಸರಗೊಂಡ ನ್ಯಾಯಮೂರ್ತಿ ಅರವಿಂದ ಕುಮಾರ್‌, ‘ಸರಿ ಹಾಗಿದ್ದರೆ, ನಾನು ಕರ್ನಾಟಕದವ. ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ನೀವು ಮಾತು ಮುಂದುವರೆಸಿ’ ಎಂದು ಕನ್ನಡದಲ್ಲಿಯೇ ಹೇಳಿದರು. ಆಗ ಕಕ್ಷಿದಾರ ಕಕ್ಕಾಬಿಕ್ಕಿಯಾಗಿ ‘ನನಗೆ ಕನ್ನಡ ಬರುವುದಿಲ್ಲ’ ಎಂದರು.

ಆಗ ನ್ಯಾ.ಅರವಿಂದ ಕುಮಾರ್‌ ಅವರು, ‘ಇದು ಹೈಕೋರ್ಟ್‌, ಅಧೀನ ಕೋರ್ಟ್‌ ಅಲ್ಲ. ಇಲ್ಲಿ ಏನಿದ್ದರೂ ಇಂಗ್ಲಿಷ್‌ನಲ್ಲಿಯೇ ವಾದ ಮಂಡನೆ ಮಾಡಬೇಕು’ ಎಂದು ತಿಳಿಸಿದರು. ನಂತರ ಕೋರ್ಟ್‌ ಕಲಾಪ ಮುಂದುವರೆದಿದೆ. ಅರವಿಂದ್ ಕುಮಾರ್ ಅವರು ಕಳೆದ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.