Saturday, 14th December 2024

ದೇಶಿ ನಿರ್ಮಿತ ಬಂದೂಕಿನಿಂದ ಪೇದೆಗೆ ಶೂಟ್‌

ಕೊಯಮತ್ತೂರು: ತನಿಖೆಯ ವೇಳೆ ಕೊಲೆ ಆರೋಪಿಯು ಪೊದೆಯೊಂದರಲ್ಲಿ ಬಚ್ಚಿಟ್ಟಿದ್ದ ದೇಶಿ ನಿರ್ಮಿತ ಬಂದೂಕಿನಿಂದ ಪೊಲೀಸ್‌ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವ ಘಟನೆ ಇಲ್ಲಿನ ಸರವಣಂಪಟ್ಟಿಯಲ್ಲಿ ಮಂಗಳ ವಾರ ನಡೆದಿದೆ.

ಗುಂಡಿನ ಚಕಮಕಿಯಲ್ಲಿ ಕೊಲೆ ಆರೋಪಿ ಕೊಯಮತ್ತೂರಿನ ಸ್ಥಳೀಯ ಗ್ಯಾಂಗ್‌ನ ನಾಯಕ ಸಂಜಯ್ ರಾಜಾ ಗಾಯಗೊಂಡಿದ್ದಾನೆ. ರಾಜಾ, ಹದಿನೈದು ದಿನಗಳ ಹಿಂದೆ ನಗರದ ಅವರಂಪಾಲಯಂ ಪ್ರದೇಶದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಭಾಗಿಯಾಗಿದ್ದಾನೆ. ಕೆಲ ದಿನಗಳ ಹಿಂದೆ ಚೆನ್ನೈನ ನ್ಯಾಯಾಲಯದ ಮುಂದೆ ಶರಣಾಗಿದ್ದ ಆತನನ್ನು ಕಸ್ಟಡಿಗೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಆರೋಪಿಗಳನ್ನು ನಗರದ ಸರವಣಂಪಟ್ಟಿಗೆ ಕರೆದೊಯ್ದ ಪೊಲೀಸರು, ಹತ್ಯೆಗೆ ಬಳಸಿದ ದೇಶಿ ನಿರ್ಮಿತ ಪಿಸ್ತೂಲ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ರಾಜಾ ಇದ್ದಕ್ಕಿದ್ದಂತೆ ಪೊದೆಯಲ್ಲಿ ಅಡಗಿಸಿಟ್ಟಿದ್ದ ಬಂದೂಕನ್ನು ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ. ಸಮಯಪ್ರಜ್ಞೆ ಯಿಂದ ಇನ್ಸ್‌ಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆತ ಇನ್ನೊಂದು ಸುತ್ತಿನ ಗುಂಡಿನ ದಾಳಿ ನಡೆಸುವುದರೊಳಗೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೆಳಕ್ಕೆ ಬಿದ್ದ ಆತ ಕೈಯ್ಯಲ್ಲಿದ್ದ ಪಿಸ್ತೂಲ್‌ ನೆಲಕ್ಕೆ ಹಾಕಿದ್ದಾನೆ. ನಂತರ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಗೆ ಬಳಸಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.