Saturday, 14th December 2024

ಕೆಫೆಯಲ್ಲಿ ಆಸನಗಳ ವಿಚಾರವಾಗಿ ವಾಗ್ವಾದ: ಗುಂಡಿನ ದಾಳಿ, ಐವರ ಬಂಧನ

ವದೆಹಲಿ: ನೈರುತ್ಯ ದೆಹಲಿಯ ಸತ್ಯ ನಿಕೇತನ ಪ್ರದೇಶದ ಕೆಫೆಯೊಂದರಲ್ಲಿ ಕುಳಿತುಕೊಳ್ಳುವ ಆಸನಗಳ ವಿಚಾರವಾಗಿ ಮಾಲೀಕರೊಂದಿಗೆ ವಾಗ್ವಾದ ನಡೆಸಿ, ಗುಂಡಿನ ದಾಳಿ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಅಹಮದ್ (26), ಔರಂಗಜೇಬ್ (26), ಅತುಲ್ (20), ಜಾವೇದ್ (23) ಮತ್ತು ಆದಿಲ್ (19) ಎಂದು ಗುರುತಿಸಲಾಗಿದೆ.

ದಕ್ಷಿಣ ಕ್ಯಾಂಪಸ್ ಪೊಲೀಸ್ ಠಾಣೆಗೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಆರೋಪಿ ಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ನೈರುತ್ಯ) ರೋಹಿತ್ ಮೀನಾ ತಿಳಿಸಿದ್ದಾರೆ.

ಕೆಫೆಗೆ ಬಂದಿದ್ದ ಆರೋಪಿಗಳು ಕುಳಿತುಕೊಳ್ಳುವ ಕುರ್ಚಿ ವಿಚಾರಕ್ಕೆ ಸಿಬ್ಬಂದಿ ಮತ್ತು ಮಾಲೀಕ ರೋಹಿತ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಬಳಿಕ ಕೆಫೆಯ ಹೊರಗೆ ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಟ್ಟುಹಬ್ಬ ಆಚರಿಸುವ ಸಲುವಾಗಿ ಆರೋಪಿಗಳು ಕೆಫೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.