ಚಂಡೀಗಢ: ರಾಜ್ಯದ ಕಪುರ್ತಲಾ ಜಿಲ್ಲೆಯಲ್ಲಿ ನಿಹಾಂಗ್ ಗುಂಪಿನ ಸದಸ್ಯರು ಗುಂಡು ಹಾರಿಸಿದ ಪರಿಣಾಮ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದು, ಇಬ್ಬರು ಇತರೆ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗುರುದ್ವಾರದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಸುಲ್ತಾನ್ಪುರ ಲೋಧಿಯಲ್ಲಿ ನಿಹಾಂಗ್ ಗುಂಪಿನ ಕೆಲವು ಸದಸ್ಯರ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ.
ಪೊಲೀಸರು ರಸ್ತೆಯಲ್ಲಿ ನಿಂತಿದ್ದಾಗ ನಿಹಾಂಗ್ಗಳು ಗುಂಡು ಹಾರಿಸಿದ್ದಾರೆ. ಒಬ್ಬ ಕಾನ್ಸ್ಟೆಬಲ್ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡರು ಎಂದು ಕಪುರ್ತಲಾ ಪೊಲೀಸ್ ವರಿಷ್ಠಾಧಿಕಾರಿ ತೇಜ್ಬೀರ್ ಸಿಂಗ್ ಹುಂದಾಲ್ ಹೇಳಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಗುರುದ್ವಾರವನ್ನು ಅತಿಕ್ರಮಣ ಮಾಡಿದ ಆರೋಪದಲ್ಲಿ ನಿಹಾಂಗ್ ಗುಂಪಿನ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ಮುಂದು ವರೆದಿದೆ. ಗುರುದ್ವಾರದ ಆವರಣವನ್ನು ತೆರವುಗೊಳಿಸಲು ಹೋದಾಗ ನಿಹಾಂಗ್ ಗುಂಪಿನವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಕನಿಷ್ಠ 30 ನಿಹಾಂಗ್ಗಳು ಇನ್ನೂ ಗುರುದ್ವಾರದೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ.