Friday, 22nd November 2024

Gutka Packet In Tirupati Laddu: ಬೀಫ್‌ ಕೊಬ್ಬು ಕಲಬೆರಕೆ ಆಯ್ತು.. ಇದೀಗ ಗುಟ್ಕಾ ಪ್ಯಾಕೆಟ್‌ ಪತ್ತೆ; ಒಂದೆರಡಲ್ಲ ತಿರುಪತಿ ಲಡ್ಡು ವಿವಾದ!

Gutka packet in Tirupati laddu

ಹೈದರಾಬಾದ್: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ವಿವಾದ ಬೆನ್ನಲ್ಲೇ ದೇವರ ಲಡ್ಡು ಪ್ರಸಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಶಾಕಿಂಗ್‌ ಸಂಗತಿ ಹೊರಬಿದ್ದಿದೆ. ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್‌(Gutka Packet In Tirupati Laddu) ಪತ್ತೆಯಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಇನ್ನು ಈಗಾಗಲೇ ಭುಗಿಲೆದ್ದಿರುವ ವಿವಾದದ ಕಿಚ್ಚಿಗೆ ಇದು ಮತ್ತಷ್ಟು ತುಪ್ಪ ಸುರಿಯುವಂತಿದೆ.

ಏನಿದು ವಿಡಿಯೋ?

ಆಂ‍ಧ್ರಪ್ರದೇಶದ ಖಮ್ಮಂನ ಗೊಲ್ಲಗುಡೆಂನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಗೊಲ್ಲಗುಡೆಂ ಪಂಚಾಯಿತಿ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಎಂಬ ಮಹಿಳೆ ಸೆ.19ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗಿದ್ದರು. ಬರುವಾಗ ಬಂಧುಗಳಿಗೆ, ಮನೆಯ ಸುತ್ತಮುತ್ತಲಿನವರಿಗೆ ಪ್ರಸಾದ ಕೊಡಲು ಲಡ್ಡುಗಳನ್ನು ತಂದಿದ್ದಳು. ಈ ಹಿನ್ನೆಲೆಯಲ್ಲಿ ಭಾನುವಾರ (ಸೆಪ್ಟೆಂಬರ್ 22) ಪ್ರಸಾದ ಹಂಚಲು ಲಡ್ಡೂಗಳ ಪಾಕೆಟ್‌ಗಳನ್ನು ತೆರೆದಾಗ ಅವರಿಗೆ ಆಘಾತವುಂಟಾಗಿತ್ತು. ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್‌ ಕಾಣಿಸಿಕೊಂಡಿದೆ. ಇದರಿಂದ ಮಹಿಳೆ ತಬ್ಬಿಬ್ಬಾದಳು. ಅತ್ಯಂತ ಪವಿತ್ರವಾದ ಲಡ್ಡುವಿನಲ್ಲಿ ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಇರುತ್ತದೆ ಎಂದುಕೊಂಡಿದ್ದ ಮಹಿಳೆ ಗುಟ್ಕಾ ಪ್ಯಾಕೆಟ್ ನೋಡಿ ಬೆಚ್ಚಿಬಿದ್ದಿದ್ದರು.

ಇನ್ನು ಇದರ ವಿಡಿಯೋವನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಈ ಬಗ್ಗೆ ಹಿಂದೂ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿವೆ. ಇದೆಲ್ಲ ಭಕ್ತಾದಿಗಳ ಭಾವನೆಗೆ ಧಕ್ಕೆ ತರಲು ಕೆಲವರು ನಡೆಸುತ್ತಿರುವ ಷಡ್ಯಂತ್ರ ಎಂದು ಹಲವರು ಕಿಡಿಕಾರಿದ್ದಾರೆ.

ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ತನಿಖೆಯನ್ನು ಆಂಧ್ರ ಸರ್ಕಾರ ಎಸ್‌ಐಟಿಗೆ ಒಪ್ಪಿಸಿದೆ. ಮತ್ತೊಂದೆಡೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ 11ದಿನಗಳ ಪ್ರಾಯಶ್ಚಿತ ಕಾರ್ಯವನ್ನು ಕೈಗೆತಿತಕೊಂಡಿದ್ದಾರೆ.

ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.

ಕರ್ನಾಟಕ ಹಾಲು ಒಕ್ಕೂಟ (KMF) ಈ ವಿವಾದಕ್ಕೆ ಸಂಬಂಧಪಟ್ಟಂತೆ ಗುರುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕೆಎಂಎಫ್, ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ (ಕೆಎಂಎಫ್‌) ತುಪ್ಪವನ್ನು ಖರೀದಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಚಂದ್ರಬಾಬು ನಾಯ್ಡು ಆರೋಪಕ್ಕೆ ಸಂಬಂಧಿಸಿದಂತೆ ವರದಿಯನ್ನು ಟಿಡಿಪಿ (TDP) ಬಹಿರಂಗಪಡಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddoo Row: ತಿರುಪತಿ ಲಡ್ಡು ಪ್ರಸಾದ ವಿವಾದ; ಪ್ರಧಾನಿಗೆ ಪತ್ರ ಬರೆದ ಜಗನ್