Friday, 22nd November 2024

ಜ್ಞಾನವಾಪಿ ಮಸೀದಿ ಶೃಂಗಾರ್ ಗೌರಿ ವಿವಾದದ ಪ್ರಕರಣ: ನಾಳೆ ತೀರ್ಪು

ವಾರಾಣಸಿ: ಜ್ಞಾನವಾಪಿ ಮಸೀದಿ ಶೃಂಗಾರ್ ಗೌರಿ ವಿವಾದದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದೆ.

ಈ ಹಿನ್ನೆಲೆಯಲ್ಲಿ ಗಲಭೆಯಾಗದಂತೆ ಮುಂಜಾಗ್ರತೆಯಾಗಿ ವಾರಾಣಸಿ ಯಲ್ಲಿ ನಿರ್ಬಂಧಕಾಜ್ಞೆಗಳನ್ನು ಹೇರಲಾಗಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆಯಲ್ಲಿ ಹಿಂದೂ ದೇವರ ಮೂರ್ತಿಗಳಿದ್ದು, ಅವುಗಳಿಗೆ ಪೂಜೆ ಸಲ್ಲಿಸಲು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ಮಾಡಿ ಮುಗಿಸಿತ್ತು. ಸೆ.12ಕ್ಕೆ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಸೋಮವಾರ ಆದೇಶ ಹೊರ ಬೀಳಲಿದೆ. ಇದು ಕೋಮುಸೂಕ್ಷ್ಮ ವಿಚಾರ ವಾದ್ದರಿಂದ ಗಲಭೆಗಳಾಗುವ ಸಾಧ್ಯತೆ ಇದೆ.

ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಇಡೀ ವಾರಾಣಸಿ ನಗರವನ್ನು ವಿವಿಧ ವಲಯಗಳಾಗಿ ವಿಭಜಿಸಿ ಸೂಕ್ತ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪಥ ಸಂಚಲನ, ಫ್ಲ್ಯಾಗ್ ಮಾರ್ಚ್‌ ಗಳನ್ನು ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ವಾರಾಣಸಿಯ ಪೊಲೀಸ್ ಆಯುಕ್ತ ಸತೀಶ್ ಗಣೇಶ್ ಭಾನುವಾರ ಹೇಳಿದ್ದಾರೆ.

ಗಲಭೆಕೋರರ ಮೇಲೆ ಹದ್ದಿನ ಕಣ್ಣಿಡಲು ವಾರಾಣಸಿ ಜಿಲ್ಲೆಯ ಗಡಿ ಭಾಗದ ಪ್ರದೇಶಗಳು, ಹೋಟೆಲ್, ಗೆಸ್ಟ್ ಹೌಸ್ ಇತ್ಯಾದಿ ಸ್ಥಳಗಳ ಮೇಲೆ ನಿಗಾ ಇರಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು ಬರುವ ಸಾಧ್ಯತೆ ಇರುವುದರಿಂದ ಅದರ ಮೇಲೂ ಒಂದು ಕಣ್ಣಿಡಲಾಗಿದೆ.