Monday, 25th November 2024

Gyanvapi Case: ಜ್ಞಾನವಾಪಿ ಸಂಕೀರ್ಣದ ಹೆಚ್ಚುವರಿ ಸಮೀಕ್ಷೆಯ ಮನವಿ ತಿರಸ್ಕರಿಸಿದ ಕೋರ್ಟ್‌; ಹಿಂದೂಗಳಿಗೆ ಹಿನ್ನಡೆ

Gyanvapi Case

ಲಖನೌ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ (Gyanvapi Case) ಮಸೀದಿ ಸಂಕೀರ್ಣದ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ (ಅ. 25) ಮಹತ್ವದ ಬೆಳವಣಿಗೆ ನಡೆದಿದ್ದು, ಜ್ಞಾನವಾಪಿ ಸಂಕೀರ್ಣದಲ್ಲಿ ಹೆಚ್ಚುವರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮೀಕ್ಷೆ (ASI survey) ನಡೆಸಲು ಕೋರಿ ಹಿಂದೂ ಸಮುದಾಯ ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ನ್ಯಾಯಾಲಯ (Varanasi court) ತಿರಸ್ಕರಿಸಿದೆ. ಈ ಮೂಲಕ ಹಿಂದೂಗಳಿಗೆ ಹಿನ್ನಡೆಯಾಗಿದೆ.

ಯುಗುಲ್ ಶಂಭು ನೇತೃತ್ವದ ವಾರಣಾಸಿಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ಹಿಂದೂಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ನ್ಯಾಯಾಲಯದಲ್ಲಿ ಹಿಂದೂ ಪರ ಅರ್ಜಿ ಸಲ್ಲಿಸಿದ್ದ ವಕೀಲ ವಿಜಯ್ ಶಂಕರ್ ರಸ್ತೋಗಿ ಈ ಬಗ್ಗೆ ಮಾತನಾಡಿ. ಆದೇಶವನ್ನು ಪರಿಶೀಲಿಸುವುದಾಗಿ ಮತ್ತು 30 ದಿನದೊಳಗಾಗಿ ಈ ಆದೇಶದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ಈ ವರ್ಷದ ಫೆಬ್ರವರಿಯಲ್ಲಿ ವಿಜಯ್ ಶಂಕರ್ ರಸ್ತೋಗಿ ಅವರು ಜ್ಞಾನವಾಪಿ ಸಂಕೀರ್ಣದ ಹೆಚ್ಚುವರಿ ಎಎಸ್‌ಐ ಸಮೀಕ್ಷೆಗೆ ಅವಕಾಶ ನೀಡಬೇಕೆಂದು ಕೋರಿ ವಾರಣಾಸಿಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ‘ಪ್ರಾಚೀನ ವಿಗ್ರಹ ಸ್ವಯಂಭು ಭಗವಾನ್ ವಿಶ್ವೇಶ್ವರ ಮತ್ತು ಇತರರು ವರ್ಸಸ್ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ’ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದ ರಸ್ತೋಗಿ, “ಇಡೀ ಜ್ಞಾನವಾಪಿ ಸಂಕೀರ್ಣದ ಎಎಸ್ಐ ಸಮೀಕ್ಷೆ ನಡೆಸಲು ಆದೇಶ ನೀಡುವಂತೆ ಕೋರಿ ನಾವು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ” ಎಂದು ಹೇಳಿದ್ದರು.

ಪುರಾತತ್ವ ವಿಧಾನಗಳು, ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR), ಜಿಯೋ-ರೇಡಿಯಾಲಜಿ ಸಿಸ್ಟಮ್ ಮತ್ತು ಉತ್ಖನನವನ್ನು ಬಳಸಿಕೊಂಡು ಪ್ಲಾಟ್ ಸಂಖ್ಯೆ 9130ರಲ್ಲಿರುವ ಸಂಪೂರ್ಣ ಜ್ಞಾನವಾಪಿ ಕಾಂಪೌಂಡ್‌ನ ವೈಜ್ಞಾನಿಕ ಸಮೀಕ್ಷೆ ನಡೆಸಲು ಎಎಸ್ಐ ಮಹಾನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ರಸ್ತೋಗಿ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಕೇಂದ್ರ ಗುಮ್ಮಟ, ನೆಲಮಾಳಿಗೆಗಳು, ದ್ವಾರಗಳು ಮತ್ತು ಕೋಣೆಗಳು ಸೇರಿದಂತೆ ರಚನೆಯ ಎಲ್ಲ ಭಾಗಗಳನ್ನು ಅಸ್ತಿತ್ವದಲ್ಲಿರುವ ರಚನೆಗೆ ಯಾವುದೇ ಹಾನಿಯಾಗದಂತೆ ಸಮೀಕ್ಷೆ ಮಾಡಬೇಕೆಂದು ಅವರು ವಿನಂತಿಸಿದ್ದರು.

ಜ್ಞಾನವಾಪಿ ಕಾಂಪೌಂಡ್ ಪ್ಲಾಟ್ ಸಂಖ್ಯೆ 9130ರಲ್ಲಿದೆ. ಇದು ಭಗವಾನ್ ಆದಿ ವಿಶ್ವೇಶ್ವರನಿಗೆ ಸೇರಿದ 9131 ಮತ್ತು 9132 ಸಂಖ್ಯೆಯ ಎರಡು ಪಕ್ಕದ ಪ್ಲಾಟ್‌ಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ರಸ್ತೋಗಿ ವಿವರಿಸಿದ್ದರು. ಜ್ಞಾನವಾಪಿ ಮಸೀದಿಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿಯು ಈ ಮನವಿಯನ್ನು ವಿರೋಧಿಸಿತ್ತು.

ತಗಾದೆಯ ಇತಿಹಾಸ

1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ʼಲಾರ್ಡ್ ಆದಿ ವಿಶ್ವೇಶ್ವರ ವಿರಾಜಮಾನʼ ಪರವಾಗಿ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಪೂಜೆಗಾಗಿ ಹಸ್ತಾಂತರಿಸುವಂತೆ ಮೊಕದ್ದಮೆ ಹೂಡಲಾಯಿತು. ಸೋಮನಾಥ ವ್ಯಾಸ್, ರಾಮನಾರಾಯಣ ಶರ್ಮಾ ಮತ್ತು ಹರಿಹರ ಪಾಂಡೆ ಅವರು ಪ್ರಕರಣಗಳನ್ನು ದಾಖಲಿಸಿದರು. 1991ರ ಪೂಜಾ ಸ್ಥಳಗಳ ಕಾಯಿದೆಯ ಪ್ರಕಾರ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗದು ಎಂದು ಮುಸ್ಲಿಂ ಕಡೆಯವರು ವಾದಿಸಿದರು. ಈ ವಿವಾದವು ಸ್ವಾತಂತ್ರ್ಯಕ್ಕೆ ಮುಂಚಿನದ್ದಾಗಿರುವುದರಿಂದ, ಪೂಜಾ ಸ್ಥಳಗಳ ಕಾಯಿದೆಯು ಜ್ಞಾನವಾಪಿ ವಿವಾದಕ್ಕೆ ಅನ್ವಯಿಸುವುದಿಲ್ಲ ಎಂದು ಹಿಂದೂ ಕಡೆಯವರು ವಾದಿಸಿದರು.

ಈ ಸುದ್ದಿಯನ್ನೂ ಓದಿ: ಜ್ಞಾನವಾಪಿ ಪ್ರಕರಣ: ಎಐಎಂಸಿ ಸಲ್ಲಿಸಿದ್ದ ಅರ್ಜಿ ವಜಾ