Sunday, 15th December 2024

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ತನಿಖೆ; ಹೈ ಕಮಿಷನರ್ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ತಿರುಗೇಟು

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದಲ್ಲಿನ ಭಾರತೀಯ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ʼಆಸಕ್ತಿಯ ವ್ಯಕ್ತಿʼ (Person of interest) ಎಂದಿರುವ ಕೆನಡಾದ ಆರೋಪವನ್ನು ಭಾರತ ನಿರಾಕರಿಸಿದೆ. ಜತೆಗೆ ಈ ಹೇಳಿಕೆಯನ್ನು ಖಂಡಿಸಿದೆ.

2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಉನ್ನತ ಸಂಬಂಧಗಳು ಹದಗೆಟ್ಟಿವೆ ಎಂಬ ಆರೋಪಗಳನ್ನೂ ಭಾರತ ಸೋಮವಾರ ತಳ್ಳಿ ಹಾಕಿದೆ. ಟ್ರುಡೊ ನೇತೃತ್ವದ ಸರ್ಕಾರವು ಕೆನಡಾದೊಳಗಿನ ಖಲಿಸ್ತಾನ್ ಪರ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಭಾರತವು ಈ ಹೇಳಿಕೆಗಳನ್ನು ʼಅಸಂಬದ್ಧʼ ಎಂದು ಹೇಳಿದೆ.

“ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರು ಭಾರತದ ಅತ್ಯಂತ ಹಿರಿಯ ರಾಜತಾಂತ್ರಿಕರಾಗಿದ್ದು, 36 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಕೆನಡಾ ಸರ್ಕಾರವು ಅವರ ಮೇಲೆ ಹೊರಿಸಿರುವ ಆರೋಪಗಳು ಹಾಸ್ಯಾಸ್ಪದವಾಗಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ನಿಜ್ಜರ್ ಸಾವಿನ ತನಿಖೆ ನಡೆಸುತ್ತಿರುವ ಕೆನಡಾವು ಭಾರತೀಯ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ಈ ಪ್ರಕರಣದಲ್ಲಿ ‘ಆಸಕ್ತಿಯ ವ್ಯಕ್ತಿ’ ಎಂದು ಹೆಸರಿಸಿದ ನಂತರ ರಾಜತಾಂತ್ರಿಕ ವಿವಾದವು ತೀವ್ರ ಸ್ವುವರೂಪ ಪಡೆದುಕೊಂಡಿದೆ. ತನ್ನ ನೆಲದಲ್ಲಿ ಖಲಿಸ್ತಾನಿ ಉಗ್ರವಾದವನ್ನು ನಿಗ್ರಹಿಸುವಲ್ಲಿ ವಿಫಲವಾಗಿರುವ ಕೆನಡಾ ʼಅಸಂಬದ್ಧʼ ಹೇಳಿಕೆಗಳನ್ನು ನೀಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ.

ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮೋದಿ ಸರ್ಕಾರದ ವಿರುದ್ಧ ಪ್ರಧಾನಿ ಜಸ್ಟಿನ್ ಟ್ರುಡೊ ಆಧಾರರಹಿತ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾರತ ಕೆನಡಾಕ್ಕೆ ಸ್ಪಷ್ಟಪಡಿಸಿದೆ. ಅಲ್ಲದೇ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿ, ಖಲಿಸ್ತಾನಿ ಉಗ್ರರ ವಿರದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಭಾರತ ಆಗ್ರಹಿಸಿದೆ.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆ ದಿನವನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಸುಳ್ಳು ಆರೋಪ ಹೊರಿಸುತ್ತಲೇ ಇದೆ.

ಈ ಸುದ್ದಿಯನ್ನೂ ಓದಿ: Hardeep Singh Nijjar: ನಿಜ್ಜರ್‌ ಹತ್ಯೆ ತನಿಖಾ ವರದಿಗೆ ವೈಟಿಂಗ್‌ ಎಂದ ಕೆನಡಾ; ಮತ್ತೆ ಭಾರತದತ್ತ ಬೊಟ್ಟು ಮಾಡಿದ ಟ್ರುಡೊ