Thursday, 19th September 2024

Hardeep Singh Puri: ರಾಹುಲ್‌ ಗಾಂಧಿಗೆ ಜಿನ್ನಾ ಮನಸ್ಥಿತಿಯೇ ಇದೆ; ಹರ್ದೀಪ್‌ ಸಿಂಗ್‌ ಪುರಿ ಕಿಡಿ

Hardeep puri

ನವದೆಹಲಿ: ಅಮೆರಿಕದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi Controversy) ಸಿಖ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ(Hardeep Singh Puri) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ (Muhammad Ali Jinnah) ಅವರ ಮನಸ್ಥಿತಿಯನ್ನೇ ಹೊಂದಿದ್ದು, ದೇಶದಲ್ಲಿ ರಕ್ತಪಾತವಾಗುದನ್ನೇ ಅವರ ಬಯಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾನು ಬಯಸಿದ್ದು ನನಗೆ ಬೇಕೇ ಬೇಕು ಇಲ್ಲದಿದ್ದರೆ ನಾನು ಅದನ್ನು ನಾಶ ಮಾಡುತ್ತೇನೆ ಎಂಬುದು ಮೊಹಮ್ಮದ್‌ ಅಲಿ ಜಿನ್ನಾ ಅವರ ಮನ‍‍ಸ್ಥಿತಿಯಾಗಿತ್ತು. ಇದೀಗ ಅದೇ ಮನಸ್ಥಿತಿ ಹಾಗೂ ಅದೇ ರೀತಿಯ ವರ್ತನೆಯನ್ನು ರಾಹುಲ್‌ ತೋರುತ್ತಿದ್ದಾರೆ. ಅವರ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೆಲವೊಂದು ದುಷ್ಟಶಕ್ತಿಗಳನ್ನು ಹುಟ್ಟು ಹಾಕಿದ್ದಾರೆ. ಅದರ ಬಗ್ಗೆ ಅವರು ಈಗ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಪುರಿ ಟಾಂಗ್‌ ಕೊಟ್ಟಿದ್ದಾರೆ.

ರಾಹುಲ್‌ ಹೇಳಿದ್ದೇನು?

ಕಳೆದ ವಾರ ವರ್ಜೀನಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಭಾರತದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೆ. ಸಭೆಯ ಮುಂದಿನ ಸಾಲಿನಲ್ಲಿ ಕುಳಿತ ಸಿಖ್ ಧರ್ಮೀಯರಲ್ಲಿ ಒಬ್ಬರಿಗೆ ತಮ್ಮ ಹೆಸರು ಹೇಳುವಂತೆ ರಾಹುಲ್ ಗಾಂಧಿ ಹೇಳಿದಾಗ, ಟರ್ಬನ್‌(ಪೇಟ) ಧರಿಸಿದ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದರು. ಭಾರತದಲ್ಲಿ ಸಿಖ್ಖರು ಪೇಟವನ್ನು ಧರಿಸಲು ಅಥವಾ ಅನುಮತಿ ನೀಡಬಹುದೇ ಬೇಡವೇ, ಅಥವಾ ಅವರು ಸಿಖ್ಖರು ಗುರುದ್ವಾರಕ್ಕೆ ಹೋಗಲು ಸಾಧ್ಯವೇ ಎಂಬುದಕ್ಕಾಗಿ ಹೋರಾಟವಾಗಿದೆ. ಇದು ಕೇವಲ ಒಂದು ಧರ್ಮದಲ್ಲಿ ಅಲ್ಲ, ಎಲ್ಲಾ ಧರ್ಮದಲ್ಲಿ ಇಂತಹ ಹೋರಾಟ, ಸಂಘರ್ಷಗಳಿವೆ ಎಂದು ಹೇಳಿದ್ದಾರೆ.

ಬಿಜೆಪಿ ಕಿಡಿ

ರಾಹುಲ್ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ರಾಹುಲ್‌ ಗಾ‍ಂಧಿ ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ನಮ್ಮ ಏಕತೆ ಮತ್ತು ವೈವಿಧ್ಯತೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಂಭವಿಸಿದ 1984 ರ ಗಲಭೆಯ ಸಮಯದಲ್ಲಿ ಸಮುದಾಯವು ಪೇಟ ಮತ್ತು ಕದ ಧರಿಸಲು ಹೆದರುತ್ತಿದ್ದರು ಎಂದು ತಿರುಗೇಟು ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ʻಪಪ್ಪುʼ ಎಂದ ಜಿಲ್ಲಾಧಿಕಾರಿ; ಕಾಂಗ್ರೆಸ್‌ ಕೆಂಡಾಮಂಡಲ, FIR ದಾಖಲು