ಚಂಢೀಗಡ: ಹರಿಯಾಣದಲ್ಲಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು(Haryana Election 2024), ಶೇ.63ರಷ್ಟು ವೋಟಿಂಗ್ ಆಗಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್’ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್ (Vinesh Phogat), ಬಿಜೆಪಿಯ ದುಶ್ಯಂತ್ ಚೌಟಾಲಾ ಸೇರಿ 1031 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ. 8,821 ಶತಾಯುಷಿಗಳು ಸೇರಿ 2,03,54,350 ಮತದಾರರಿದ್ದಾರೆ. 101 ಮಹಿಳೆಯರು ಸೇರಿ 1,031 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ 464 ಅಭ್ಯರ್ಥಿಗಳು ಪಕ್ಷೇತರರು. ಬಿಜೆಪಿ, ಕಾಂಗ್ರೆಸ್,ಎಎಪಿ, ಐಎನ್‌ಎಲ್‌ಡಿ, ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷ ಕಣದಲ್ಲಿರುವ ರಾಜಕೀಯ ಪಕ್ಷಗಳಾಗಿವೆ.
ಕೆಲವೇ ಕ್ಷಣದಲ್ಲಿ ಎಕ್ಸಿಟ್ ಪೋಲ್ ರಿಸಲ್ಟ್
ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಕೆಲವೇ ಕ್ಷಣದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ.ಟುಡೇ ಚಾಣಕ್ಯ, ಆಕ್ಸಿಸ್ ಮೈ ಇಂಡಿಯಾ, ಸಿಎಸ್‌ಡಿಎಸ್, ಸಿ ವೋಟರ್, ಟೈಮ್ಸ್ ನೌ ಸೇರಿದಂತೆ ವಿವಿಧ ಸಮೀಕ್ಷೆಗಳು ಎಕ್ಸಿಟ್ ಪೋಲ್ ಪ್ರಕಟಿಸಲಿವೆ. 90 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿದೆ. ಜಾತಿ ಸಮೀಕರಣ, ರಾಜಕೀಯ ಪಕ್ಷಗಳ ಆಂತರಿಕ ಕಲಹ, ಕುಸಿದ ಪ್ರಾದೇಶಿಕ ಮಟ್ಟದ ನಾಯಕರ ಪ್ರಭಾವದ ನಡುವೆ ಸಾಮಾಜಿಕ ಚಳವಳಿ, ರೈತ ಹೋರಾಟಗಳು ಚುನಾವಣೆಗೆ ಹೊಸ ರೂಪ ನೀಡಿವೆ.
ಕೈಗಾರಿಕೆ ವಲಯ, ಉದ್ಯಮ, ವ್ಯಾಪಾರ, ಸೇವಾ ಆಧಾರಿತ ವಲಯದ ಜನ, ಹಿಂದುಳಿದ ವರ್ಗಕ್ಕೆ ಸೇರಿದ ಬಹುತೇಕ ಜನರು ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದಾರೆ. ಮೋದಿ ಅವರ ಪ್ರಭಾವ, ಅವರು ಪ್ರತಿಪಾದಿಸಿದ ರಾಷ್ಟ್ರೀಯತೆ, ದೇಶಭಕ್ತಿ ವಿಚಾರಗಳು ಈ ವರ್ಗದ ಮತದಾರರನ್ನು ಬಿಜೆಪಿ ಕಡೆ ವಾಲುವಂತೆ ಮಾಡಿದೆ. ಆದರೂ, ಆಡಳಿತ ವಿರೋಧಿ ಅಲೆ ಬಿಜೆಪಿ ನಾಯಕರನ್ನು ಇನ್ನಿಲ್ಲದಂತೆ ಕಾಡಿರುವುದು ಮಾತ್ರ ಸುಳ್ಳಲ್ಲ.
ಬಹುತೇಕ ಕೃಷಿಯನ್ನೇ ಅವಲಂಬಿಸಿರುವ (ಜಾಟ್ ಪ್ರಾಬಲ್ಯ ಪ್ರದೇಶ) ಈ ಭಾಗದಲ್ಲಿ ರದ್ದುಗೊಂಡಿರುವ ವಿವಾದಿತ ಕೃಷಿ ಕಾನೂನುಗಳು, ಸೇನೆಯ ಅಗ್ನಿವೀರ್ ಯೋಜನೆ, ಕುಸ್ತಿಪಟುಗಳ ಹೋರಾಟ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳು ಚುನಾವಣಾ ಕಣದಲ್ಲಿ ಸದ್ದು ಮಾಡಿವೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ ಮತ್ತು ಜೆಜೆಪಿ 10 ಸ್ಥಾನ ಗೆದ್ದಿದ್ದವು. ಬಿಜೆಪಿಗೆ ಬಹುಮತ ಬಾರದ ಕಾರಣ ಜೆಜೆಪಿ ಬೆಂಬಲ ನೀಡಿತ್ತು. ಆದರೆ, ಇದೀಗ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಕಣಕ್ಕಿಳಿದಿವೆ.
ಈ ಸುದ್ದಿಯನ್ನೂ ಓದಿ: Haryana Election 2024: ಹರಿಯಾಣ ವಿಧಾನಸಭೆ ಚುನಾವಣೆ ಮತದಾನ ಆರಂಭ