Friday, 22nd November 2024

Haryana Election: ಹರಿಯಾಣದಲ್ಲಿ ಹ್ಯಾಟ್ರಿಕ್‌ ಗೆಲುವಿಗೆ ಬಿಜೆಪಿ ಶತಪ್ರಯತ್ನ; ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ

Haryana Election

ಚಂಡಿಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Election) ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಬಿಜೆಪಿ (BJP) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಬಲವಾದ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ.

ಸೆಪ್ಟೆಂಬರ್‌ 4ರಂದು ಪ್ರಕಟಿಸಲಾದ 67 ಅಭ್ಯರ್ಥಿಗಳ ಪೈಕಿ 25 ಮಂದಿ ಹೊಸಬರು ಎನ್ನುವುದು ವಿಶೇಷ. ಇದೇ ವೇಳೆ ಕೆಲವು ಶಾಸಕರಿಗೆ ಬೇರೆ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಜತೆಗೆ ರಾಜ್ಯದಲ್ಲಿನ ತನ್ನ ಪ್ರಭಾವಿ ನಾಯಕರನ್ನು ಸಮಾಧಾನಪಡಿಸಲು ಮುಂದಾಗಿರುವ ಬಿಜೆಪಿ ವಂಶಪಾರಂಪರ್ಯ ವಿರುದ್ಧದ ನಿಲುವು ಮತ್ತು ಮತ್ತು 75ನೇ ವಯಸ್ಸಿನಲ್ಲಿ ನಿವೃತ್ತಿ ಎನ್ನುವ ಅಲಿಖಿತ ನಿಯಮವನ್ನು ಬದಿಗೊತ್ತಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಸೋತ ನಾಯಕರಿಗೂ ಮಣೆ

ಬಿಡುಗಡೆಗೊಂಡ ಪಟ್ಟಿಯಲ್ಲಿ 2019ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಐವರು ನಾಯಕರಿಗೆ ಮಣೆ ಹಾಕಿರುವುದು ಕಂಡು ಬಂದಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ನಾಲ್ವರು ಶಾಸಕರ ಕ್ಷೇತ್ರಗಳನ್ನು ಬದಲಾಯಿಸಲಾಗಿದ್ದು, 8 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ನಯಾಬ್ ಸಿಂಗ್ ಸೈನಿ ಅವರು ಕರ್ನಾಲ್‌ ಬದಲು ಲಾಡ್ವಾದಿಂದ ಕಣಕ್ಕಿಳಿಯಲಿದ್ದಾರೆ. ಹರಿಯಾಣ ವಿಧಾನಸಭೆಯ ಉಪ ಸ್ಪೀಕರ್ ಮತ್ತು ನಲ್ವಾ ಶಾಸಕ ರಣಬೀರ್ ಗಂಗ್ವಾ ಅವರಿಗೆ ಈ ಬಾರಿ ಬರ್ವಾಲಾದಿಂದ ಟಿಕೆಟ್ ನೀಡಲಾಗಿದ್ದು, ಕೋಸ್ಲಿ ಶಾಸಕ ಲಕ್ಷ್ಮಣ್ ಯಾದವ್ ರೇವಾರಿಯಿಂದ ಸ್ಪರ್ಧಿಸಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಬಿಜೆಪಿ ಎಸ್‌ಸಿ, ಒಬಿಸಿ ಮತ್ತು ಜಾಟ್ ಈ 3 ರಾಜ್ಯದ ಪ್ರಮುಖ ಸಮುದಾಯಗಳಿಗೆ ಆದ್ಯತೆ ನೀಡಿದೆ. ಈ 3 ಸಮುದಾಯಗಳಿಗೆ ಒಟ್ಟು 41 ಸ್ಥಾನಗಳನ್ನು ಒದಗಿಸಲಾಗಿದೆ. ಈ ಪೈಕಿ 13 ಎಸ್‌ಸಿ ಅಭ್ಯರ್ಥಿಗಳು, 15 ಒಬಿಸಿ ಅಭ್ಯರ್ಥಿಗಳು ಮತ್ತು 13 ಜಾಟ್ ಅಭ್ಯರ್ಥಿಗಳಿದ್ದಾರೆ. 67 ಅಭ್ಯರ್ಥಿಗಳ ಪೈಕಿ ಪೈಕಿ 8 ಮಂದಿ ಮಾತ್ರ ಮಹಿಳೆಯರು. 10 ಪಕ್ಷಾಂತರಿಗಳಿಗೆ ಟಿಕೆಟ್ ಸಿಕ್ಕಿದೆ.

ಹಿರಿಯ-ಕಿರಿಯ ಅಭ್ಯರ್ಥಿ

ಸಫಿಡಾನ್‌ನಿಂದ ಸ್ಪರ್ಧಿಸುತ್ತಿರುವ 78 ವರ್ಷದ ರಾಮ್ ಕುಮಾರ್ ಗೌತಮ್ ಅತ್ಯಂತ ಹಿರಿಯ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಮೆಹಮ್‌ನಿಂದ ಕಣಕ್ಕಿಳಿದಿರುವ ದೀಪಕ್ ಹೂಡಾ (30 ವರ್ಷ) ಮತ್ತು ಗರ್ಹಿ ಸಂಪ್ಲಾ ಕಿಲೋಯಿಯಿಂದ ಸ್ಪರ್ಧಿಸುತ್ತಿರುವ ಮಂಜು ಹೂಡಾ (30 ವರ್ಷ) ಅತ್ಯಂತ ಕಿರಿಯ ಅಭ್ಯರ್ಥಿಗಳು. ಅದಾಗ್ಯೂ ಬಿಜೆಪಿಯ ಸಾಂಪ್ರದಾಯಿಕ ಮತದಾರರರಾದ ಬ್ರಾಹ್ಮಣ, ವೈಷ್ಣವ ಮತ್ತು ಪಂಜಾಬಿ ಸಮುದಾಯಕ್ಕೆ ಸಿಕ್ಕ ಟಿಕೆಟ್‌ 24 ಮಾತ್ರ.

ಈ ಸುದ್ದಿಯನ್ನೂ ಓದಿ: Haryana Election : ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಜಾಟ್ ಮತ್ತು ಎಸ್‌ಸಿ ಸಮುದಾಯ ಆಡಳಿತ ಪಕ್ಷವಾದ ಬಿಜೆಪಿಯನ್ನು ವಿರೋಧಿಸಿತ್ತು. ಅಲ್ಲದೆ ಒಬಿಸಿಯಿಂದಲೂ ಬಿಜೆಪಿಗೆ ನಿರೀಕ್ಷಿತ ಲಾಭವಾಗಿರಲಿಲ್ಲ. ಹೀಗಾಗಿ 10 ಸ್ಥಾನಗಳ ಪೈಕಿ ಕೇಸರಿ ಪಡೆ ಕೇವಲ 5 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು. ಹರಿಯಾಣದಲ್ಲಿ ಒಟ್ಟು 90 ಸೀಟುಗಳಿದ್ದು, ಅಕ್ಟೋಬರ್‌ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 8ರಂದು ಫಲಿತಾಂಶ ಹೊರ ಬೀಳಲಿದೆ.