Thursday, 19th September 2024

Haryana Election: ಹರಿಯಾಣದಲ್ಲಿ ಕಾಂಗ್ರೆಸ್‌-ಆಪ್‌ ಜಂಟಿ ಸ್ಪರ್ಧೆ; ಸೀಟು ಹಂಚಿಕೆ ಕಗ್ಗಂಟು

Haryana Election

ಚಂಡೀಗಡ: ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಹರಿಯಾಣದಲ್ಲಿ(Haryana Election) ಕಾಂಗ್ರೆಸ್‌(Congress) ಮತ್ತು ಆಮ್‌ ಆದ್ಮಿ ಪಕ್ಷ (AAP) ಮೈತ್ರಿ ಸ್ಪರ್ಧೆಗೆ ಮುಂದಾಗಿವೆ. ಜಂಟಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿರುವ ಉಭಯ ಪಕ್ಷಗಳ ನಡುವೆ ಈಗಾಗಲೇ ಸೀಟು ಹಂಚಿಕೆ ವಿಚಾರವಾಗಿ ಒಂದು ಸುತ್ತಿನ ಮಾತುಕತೆ ನಡೆದಿದೆ.

ಒಟ್ಟು 90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ 10 ಸೀಟುಗಳಿಗೆ ಆಪ್‌ ಬೇಡಿಕೆ ಇಟ್ಟಿದೆ. ಆದರೆ ಕೇವಲ ಐದರಿಂದ ಏಳು ‍ಸ್ಥಾನಗಳನ್ನು ನೀಡಲು ಮಾತ್ರ ಕಾಂಗ್ರೆಸ್‌ ಒಪ್ಪಿದೆ.  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಒಂದು ಸ್ಥಾನ ನೀಡಲು ಕಾಂಗ್ರೆಸ್ ಸಹ ಸಿದ್ಧವಾಗಿದೆ ಎಂದು ವರದಿಯಾಗಿದೆ. ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಬುಧವಾರ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 4 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನಾಂಕವಾಗಿದ್ದು, ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 1 ರಿಂದ ಅಕ್ಟೋಬರ್ 5 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಚುನಾವಣಾ ಆಯೋಗ (ECI) ಶನಿವಾರ ಈ ಪ್ರಕಟಣೆ ಹೊರಡಿಸಿದೆ. ಇದೇ ವೇಲೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕವನ್ನು ಅಕ್ಟೋಬರ್ 4 ರಿಂದ ಅಕ್ಟೋಬರ್ 8 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಗುರು ಜಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಹಬ್ಬದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಆಚರಿಸುವ ಬಿಷ್ಣೋಯ್ ಸಮುದಾಯವನ್ನು ಗೌರವಿಸಲು ಮತದಾನದ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.  ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಬಹುದು ಮತ್ತು ಹರಿಯಾಣ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು” ಎಂದು ಅದು ಹೇಳಿದೆ.

ಅಕ್ಟೋಬರ್ 1 ರ ಮೊದಲು ಮತ್ತು ನಂತರ ರಜಾದಿನಗಳನ್ನು ಉಲ್ಲೇಖಿಸಿ ಅಕ್ಟೋಬರ್ 1 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡುವಂತೆ ಕೋರಿ ಹರಿಯಾಣ ಬಿಜೆಪಿ ಈ ಹಿಂದೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ, ಅಕ್ಟೋಬರ್ 1 ರ ಮೊದಲು ಮತ್ತು ನಂತರದ ವಾರದಲ್ಲಿ ಜನರು ರಜೆಯಲ್ಲಿ ಹೋಗುತ್ತಾರೆ. ಇದು ಮತದಾರರ ಶೇಕಡಾವಾರು ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಹೊಸ ದಿನಾಂಕವನ್ನು ನಿಗದಿಪಡಿಸುವಂತೆ ಅವರು ಚುನಾವಣಾ ಆಯೋಗವನ್ನು ಕೋರಿದ್ದರು.

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಮತದಾರರು ಸೆಪ್ಟೆಂಬರ್ 18, 25 ರಂದು ಮತ್ತು ಮೂರನೇ ಹಂತ ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: JK Election: ಜಮ್ಮು ಕಾಶ್ಮೀರ ಚುನಾವಣೆ; ಸಮೀಕ್ಷೆ ಹೇಳೋದೇನು?

Leave a Reply

Your email address will not be published. Required fields are marked *