ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆ(Haryana election)ಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿನ್ನೆ ಚುನಾವಣೋತ್ತರ ಸಮೀಕ್ಷೆ(Exit Poll 2024)ಗಳೂ ಹೊರಬಿದ್ದಿದೆ. ಹರಿಯಾಣದಲ್ಲಿ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ಗದ್ದುಗೆ ಹಿಡಿಯುವುದು ಖಚಿತ ಎಂಬುದು ಸಾಭೀತಾಗುತ್ತಿದ್ದಂತೆ ಮುಂದಿನ ಸಿಎಂ ಯಾರೆಂಬ ಚರ್ಚೆ ಶುರುವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ(Bhupinder Singh Hooda) ಮತ್ತು ಕುಮಾರಿ ಸೆಲ್ಜಾ ಹೆಸರು ಮುಂಚೂಣಿಯಲ್ಲಿದೆ. ಈ ಬಗ್ಗೆ ಹೂಡಾ ಪ್ರತಿಕ್ರಿಯಿಸಿದ್ದಾರೆ.
ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭೂಪಿಂದರ್ ಸಿಂಗ್ ಹೂಡಾ, ರಾಜ್ಯದಲ್ಲಿ ತಮ್ಮ ಪಕ್ಷವು ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಯಾರಾಗುತ್ತಾರೆ ಎಂಬುದನ್ನು ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸಲಿದೆ ಎಂದರು. ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಿ ಸೆಲ್ಜಾ ಅವರ ಹೆಸರು ಕೇಳಿಬರುತ್ತಿರುವ ಬಗ್ಗೆ ಅವರನ್ನು ಕೇಳಿದಾಗ, ರಾಜಕೀಯ ಆಕಾಂಕ್ಷೆ ಎಲ್ಲರಿಗೂ ಇದೇ ಇರುತ್ತದೆ. ಮುಖ್ಯಮಂತ್ರಿ ಹುದ್ದೆ ಪ್ರತಿಯೊಬ್ಬರ ಹಕ್ಕು. ಇದು ಪ್ರಜಾಪ್ರಭುತ್ವ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೇವೆ. ಅವರು ಕುಮಾರಿ ಸೆಲ್ಜಾ ನಮ್ಮ ಹಿರಿಯ ನಾಯಕಿ ಎಂದು ಭೂಪಿಂದರ್ ಹೂಡಾ ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ನ ಪ್ರಮುಖ ದಲಿತ ಪ್ರತಿನಿಧಿ ಮತ್ತು ಐದು ಬಾರಿ ಸಂಸದರಾಗಿರುವ ಸೆಲ್ಜಾ ಅವರು ಗುರುವಾರ ತಮ್ಮ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರು ಪರಿಗಣಿಸುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹೂಡಾ, ಸಿಎಂ ಹುದ್ದೆಗೆ ಹಲವರ ಹೆಸರು ಕೇಳಿಬರುವುದು ಸಹಜ. ಹೈಕಮಾಂಡ್ ತಮ್ಮ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಪಕ್ಷಕ್ಕೆ ಆ ವ್ಯಕ್ತಿ ನೀಡಿರುವ ಕೊಡುಗೆಗಳನ್ನು ಅಳೆಯುತ್ತದೆ ಎಂದು ತಿಳಿಸಿದ್ದಾರೆ.
ಪೀಪಲ್ಸ್ ಪಲ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) 54 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ದಶಕದ ಆಡಳಿತದ ಹಿಡಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳವು ಸಾಧ್ಯತೆ ದಟ್ಟವಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಇದನ್ನೇ ಹೇಳಿದ್ದು, ಆ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಹೊತ್ತಿರುವ ಬಿಜೆಪಿ ಆಸೆಗೆ ತನ್ನೀರೆರಚಿದಂತಾಗಿದೆ.
ಹರಿಯಾಣ | INC | BJP | JJP | INLD | ಇತರೆ |
ದೈನಿಕ ಭಾಸ್ಕರ್ | 44-54 | 19-29 | 0-1 | 1-5 | 4-9 |
ದ್ರುವ ರಿಸರ್ಚ್ | 57-64 | 27-32 | – | – | 5-8 |
ಪೀಪಲ್ಸ್ ಪಲ್ಸ್ | 55 | 26 | 0-1 | 2-3 | 3-5 |
ರಿಪಬ್ಲಿಕ್ ಮ್ಯಾಟ್ರಿಜ್ | 55-62 | 18-24 | 0-3 | 3-6 | 2-5 |
ಈ ಸುದ್ದಿಯನ್ನೂ ಓದಿ: Exit poll 2024: ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ: ಕಣಿವೆ ರಾಜ್ಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ಗೆ ಮುನ್ನಡೆ, ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಪ್ರಚಂಡ ಗೆಲುವು!