ಹರಿಯಾಣದಲ್ಲಿ (Haryana Election) ಬಿಜೆಪಿ (bjp) ಗೆಲುವಿನ ಹಿಂದೆ ಸಾಕಷ್ಟು ಮಂದಿಯ ಶ್ರಮವಿದೆ. ಇವರಲ್ಲಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಕೂಡ ಒಬ್ಬರು. ಪಕ್ಷದ ಮುಖ್ಯ ತಂತ್ರಗಾರ ಅಮಿತ್ ಶಾ (Amit shah) ಅವರ ಆಪ್ತರಾಗಿರುವ ಧರ್ಮೇಂದ್ರ ಪ್ರಧಾನ್ ಹರಿಯಾಣದಲ್ಲಿ (Haryana ) ಬಿಜೆಪಿಯ ಐತಿಹಾಸಿಕ ಮೂರನೇ ಗೆಲುವಿನ ಶಿಲ್ಪಿ ಎಂದೇ ಪರಿಗಣಿಸಲಾಗಿದೆ.
ಪೆಟ್ರೋಲಿಯಂ ಸಚಿವಾಲಯವನ್ನು ನಿಭಾಯಿಸಿದ್ದ ಒಡಿಶಾದ ನಾಯಕ ಧರ್ಮೇಂದ್ರ ಪ್ರಧಾನ್ ಈಗ ಶಿಕ್ಷಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಗೆಲುವಿಗೆ ಕಷ್ಟಕರವಾಗಿರುವ ರಾಜ್ಯಗಳು, ಕಠಿಣ ಚುನಾವಣಾ ಕದನಗಳನ್ನು ನಿಭಾಯಿಸುವ ಬಿಜೆಪಿಯ ಪ್ರಮುಖ ವ್ಯಕ್ತಿಯಾಗಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ.
ಹರಿಯಾಣಕ್ಕಿಂತ ಮೊದಲು ಅವರನ್ನು 2017ರಲ್ಲಿ ಉತ್ತರಾಖಂಡದಲ್ಲಿ, 2022 ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಯೋಜಿಸಲಾಗಿತ್ತು. 2021ರ ಪಶ್ಚಿಮ ಬಂಗಾಳದ ಕದನದಲ್ಲಿ ಪ್ರಧಾನ್ ಅವರನ್ನು ಮಾತ್ರ ಇಲ್ಲಿಗೆ ನಿಯೋಜಿಸಲಾಯಿತು. ರಾಜ್ಯಾದ್ಯಂತ ಮಮತಾ ಬ್ಯಾನರ್ಜಿ ಪಕ್ಷ ಭರ್ಜರಿ ಜಯಗಳಿಸಿದರೂ ಅವರ ಕ್ಷೇತ್ರವಾದ ನಂದಿಗ್ರಾಮ್ ಅನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯುವಲ್ಲಿ ಪ್ರಧಾನ್ ಪ್ರಮುಖ ಪಾತ್ರ ವಹಿಸಿದ್ದರು.
ಹರಿಯಾಣದಲ್ಲಿ ಬಿಜೆಪಿ ಆಡಳಿತ ವಿರೋಧಿ ಭಾವನೆಯನ್ನು ಎದುರಿಸುತ್ತಿತ್ತು. ಜೊತೆಗೆ ಬಹು ಅತೃಪ್ತ ವಿಭಾಗಗಳಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು. ಇದನ್ನು ಸ್ಪಷ್ಟವಾಗಿ ನಿಭಾಯಿಸುವಲ್ಲಿ ಧರ್ಮೇಂದ್ರ ಪ್ರಧಾನ್ ಸಮರ್ಥ ವ್ಯಕ್ತಿಯಾಗಿದ್ದರು. ಜಾಟರು, ರೈತರು, ಸೇನಾ ಆಕಾಂಕ್ಷಿಗಳು ಅಗ್ನಿವೀರ್ ಯೋಜನೆಯಿಂದ ಅತೃಪ್ತರಾಗಿದ್ದಾಗ, ಪಕ್ಷದ ಕಾರ್ಯಕರ್ತರು ಅಬ್ಬರದ ಕಾಂಗ್ರೆಸ್ ಪ್ರಚಾರದಿಂದ ತತ್ತರಿಸಿದ್ದರು. ಮಾತ್ರವಲ್ಲದೆ ಟಿಕೆಟ್ ಹಂಚಿಕೆಯಿಂದ ಅತೃಪ್ತರಾಗಿ ಬಿಜೆಪಿಯೊಳಗೆ ಅನೇಕರು ಬಂಡಾಯವೆದ್ದರು. ಈ ಸಂದರ್ಭದಲ್ಲಿ ಪ್ರಧಾನ್ ಒಂದು ತಿಂಗಳಿಗೂ ಹೆಚ್ಚು ಕಾಲ ರಾಜ್ಯದಲ್ಲೇ ಉಳಿದು ರೋಹ್ಟಕ್, ಕುರುಕ್ಷೇತ್ರ ಮತ್ತು ಪಂಚಕುಲದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಅವರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು. ಅವರ ಪರವಾಗಿ ಕೇಂದ್ರ ನಾಯಕತ್ವದೊಂದಿಗೆ ಸಂಪರ್ಕ ಸಾಧಿಸಿದರು. ಅವರು ಕಾರ್ಯಕರ್ತರನ್ನು ಹುರಿದುಂಬಿಸಿದರು, ಕಾಂಗ್ರೆಸ್ ಪ್ರಚಾರವನ್ನು ನಿರ್ಲಕ್ಷಿಸಿ ಅಭ್ಯರ್ಥಿ ಆಯ್ಕೆಗೆ ಸಹಾಯ ಮಾಡಿದರು.
ಸಣ್ಣ ಸಣ್ಣ ಸಭೆಗಳನ್ನು ಆಯೋಜಿಸಿ ಕಾರ್ಯಕರ್ತರನ್ನು ಪ್ರಧಾನ್ ಹುರಿದುಂಬಿಸಿದರು. ನ್ಯೂನತೆಗಳನ್ನು ಗುರುತಿಸಿ ತಕ್ಷಣವೇ ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡಿದರು. ಹರಿಯಾಣದಲ್ಲಿ ಕೋಪಗೊಂಡ ಜನರನ್ನು ಸಮಾಧಾನಪಡಿಸುವ ಸಂಪೂರ್ಣ ಪ್ರಯತ್ನ ನಡೆಸಿದರು. ದುರ್ಬಲ ಬೂತ್‌ಗಳನ್ನು ಗುರುತಿಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು.
ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ ಅನಂತರ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಿದರು. ನಾಮಪತ್ರ ಹಿಂಪಡೆಯುವ ಹೊತ್ತಿಗೆ ಸುಮಾರು 25 ಬಂಡಾಯಗಾರರಿಂದ ಪಕ್ಷವು ಮೂವರನ್ನು ಮಾತ್ರ ಎದುರಿಸಬೇಕಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾದ ಅನಂತರ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಯೋಜನೆಯನ್ನು ಹಾಳುಮಾಡುತ್ತಾರೆ ಎಂದೆನಿಸುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದು ಪ್ರಧಾನ್. 24ಕ್ಕೂ ಹೆಚ್ಚು ಬಂಡಾಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದಾಗ ಪ್ರಧಾನ್ ಅವರ ನಾಮಪತ್ರ ಮರಳಿ ಪಡೆಯುವಲ್ಲಿ ಶ್ರಮಿಸಿದರು. ಅಂತಿಮವಾಗಿ ಮೂವರು ಬಂಡಾಯ ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದರು.
ಪ್ರಧಾನ್ ಅವರ ಪ್ರಯತ್ನಗಳು ಫಲ ನೀಡಿತು. ಅಂತಿಮವಾಗಿ ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಚುನಾವಣೆಯನ್ನು ಗೆದ್ದುಕೊಂಡಿತು. ರಾಜ್ಯದ 90 ವಿಧಾನಸಭಾ ಸ್ಥಾನಗಳ ಪೈಕಿ 48ರಲ್ಲಿ ವಿಜಯಶಾಲಿಯಾಗಿದೆ. ಕಾಂಗ್ರೆಸ್ 37 ಸ್ಥಾನಗಳನ್ನು ಗೆದ್ದಿದೆ.