Friday, 13th December 2024

Haryana Polls: ಕುಸ್ತಿಪಟು ವಿನೇಶ್‌ ಪೋಗಟ್‌ ಜೂಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ

vinesh phogat

ಹೊಸದಿಲ್ಲಿ: ಹರಿಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ (Haryana Elections) ಕಾಂಗ್ರೆಸ್ ಪಕ್ಷವು (Congress Party) ಶುಕ್ರವಾರ ತನ್ನ 31 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರನ್ನು ಜೂಲಾನಾ ವಿಧಾನಸಭಾ ಸ್ಥಾನದಿಂದ ಕಣಕ್ಕಿಳಿಸಿದೆ.

ಇನ್ನೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ (Bajarang Punia) ಅವರೊಂದಿಗೆ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳಲ್ಲಿ ವಿನೇಶ್ ಫೋಗಟ್ ಅವರಿಗೆ ಟಿಕೆಟ್‌ ದೊರೆತಿದೆ. ಸೋಮವಾರ ಅವರು ಕಾಂಗ್ರೆಸ್ ಸೇರಿದ್ದರು.

ಪಕ್ಷವು ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಸೋನಿಪತ್‌ನಿಂದ ಸುರೇಂದರ್ ಪನ್ವಾರ್, ಗೋಹಾನಾದಿಂದ ಜಗಬೀರ್ ಸಿಂಗ್ ಮಲಿಕ್ ಮತ್ತು ರೋಹ್ಟಕ್‌ನಿಂದ ಭರತ್ ಭೂಷಣ್ ಬಾತ್ರಾ ಅವರಿಗೆ ಟಿಕೆಟ್ ನೀಡಲಾಗಿದೆ.

ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಹೊಡಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಲಾಡ್ವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇವಾ ಸಿಂಗ್ ಅವರು ಹರಿಯಾಣ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ನಯಾಬ್ ಸೈನಿ ಅವರನ್ನು ಎದುರಿಸಲಿದ್ದಾರೆ.

ಬದ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಕುಲದೀಪ್ ವಾಟಾ, ಜಜ್ಜರ್‌ನಿಂದ ಗೀತಾ ಭುಕ್ಕಲ್ (ಎಸ್‌ಸಿಗೆ ಮೀಸಲಾಗಿದೆ), ರೆವಾರಿಯಿಂದ ಚಿರಂಜೀವ್ ರಾವ್, ನುಹ್‌ನಿಂದ ಅಫ್ತಾಬ್ ಅಹ್ಮದ್ ಮತ್ತು ಫರಿದಾಬಾದ್ ಎನ್‌ಐಟಿಯಿಂದ ನೀರಜ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ.

ದೆಹಲಿಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ನಡೆಸಿದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಪಕ್ಷದ ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಹರಿಯಾಣದ ಉಸ್ತುವಾರಿ ದೀಪಕ್ ಬಬಾರಿಯಾ ಮತ್ತು ಹೂಡಾ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆಪ್ಟೆಂಬರ್ 16 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು.

ಈ ವಾರದ ಆರಂಭದಲ್ಲಿ, 21 ಹಾಲಿ ಶಾಸಕರನ್ನು ಇಟ್ಟುಕೊಂಡು ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಗೆ 67 ಅಭ್ಯರ್ಥಿಗಳನ್ನು ಘೋಷಿಸಿದೆ. ಜೊತೆಗೆ ಕನಿಷ್ಠ 20 ಹೊಸ ಮುಖಗಳನ್ನು ಪರಿಚಯಿಸಿದೆ. ಹರಿಯಾಣದಲ್ಲಿ ತನ್ನ 10 ವರ್ಷಗಳ ಅಧಿಕಾರವನ್ನು ಉಳಿಸಿಕೊಳ್ಳುವ ಹಾಗೂ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಎದುರಿಸುವ ಪ್ರಯತ್ನದಲ್ಲಿ ಕೇಸರಿ ಪಕ್ಷ ಕನಿಷ್ಠ ಎಂಟು ಹಾಲಿ ಶಾಸಕರನ್ನು ಕೈಬಿಟ್ಟಿದೆ.

ಈ ಸುದ್ದಿ ಓದಿ: Haryana Polls: ಪೋಗಟ್‌, ಪೂನಿಯಾ ಕಾಂಗ್ರೆಸ್‌ ಸೇರ್ಪಡೆ- ʻಹರಿಯಾಣ ದಂಗಲ್‌ʼಗೆ ಕುಸ್ತಿಪಟುಗಳು ಸಜ್ಜು