Friday, 22nd November 2024

Haryana Polls: ಇಂದು ವಿನೇಶ್, ಬಜರಂಗ್ ಕಾಂಗ್ರೆಸ್‌ ಸೇರ್ಪಡೆ

Haryana Polls

ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ಬಜರಂಗ್ ಪುನಿಯಾ(Bajrang Punia) ಅವರು ಹರಿಯಾಣ ಚುನಾವಣೆಯಲ್ಲಿ(Haryana Polls) ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳ ನಂತರ, ಇಂದು ಮಧ್ಯಾಹ್ನ 3 ಗಂಟೆಗೆ ಇಬ್ಬರೂ ಪಕ್ಷಕ್ಕೆ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಶುಕ್ರವಾರ ತಿಳಿಸಿವೆ. ಬುಧವಾರದಂದು ಉಭಯ ಕುಸ್ತಿಪಟುಗಳು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದರು.

“ವಿನೇಶ್‌ ಮತ್ತು ಬಜರಂಗ್‌ ಇಂದು ಪಕ್ಷಕ್ಕೆ ಸೇರುತ್ತಾರೆ. ಆದರೆ, ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆ ಯಲ್ಲಿ(Haryana Assembly election) ಇಬ್ಬರೂ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಸದ್ಯದಲ್ಲೇ ಸ್ಪಷ್ಟವಾಗ ಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳ ಲಿದ್ದು, ನಂತರ ಎಐಸಿಸಿ ಕೇಂದ್ರ ಕಚೇರಿಗೆ ತೆರಳಿ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ವಿನೇಶ್‌ ಜೂಲಾನಾ ಅಥವಾ ದಾದ್ರಿ ವಿಧಾನಸಭೆಯಿಂದ ಸ್ಪರ್ಧಿಸುವ ಸಾಧ್ಯತೆಯಿದ್ದರೆ, ಪುನಿಯಾ ಬದ್ಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹರಿಯಾಣದಲ್ಲಿ ಮೈತ್ರಿ ಕುರಿತು ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಎರಡೂ ಪಕ್ಷಗಳ ಉನ್ನತ ನಾಯಕರ ನಡುವೆ ಮಾತುಕತೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ Haryana Polls: ರಾಹುಲ್ ಗಾಂಧಿ ಭೇಟಿಯಾದ ಬಜರಂಗ್ ಪುನಿಯಾ,ವಿನೇಶ್ ಫೋಗಟ್; ಹರಿಯಾಣ ಚುನಾವಣೆಯಲ್ಲಿ ಸ್ಪರ್ಧೆ ಖಚಿತ?

ವಿನೇಶ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ತವರಿಗೆ ಮರಳಿದಾಗಿನಿಂದಲೂ ಕಾಂಗ್ರೆಸ್ ನಾಯಕರು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ರೋಹ್ಟಕ್ ಸಂಸದ ದೀಪೇಂದರ್ ಹೂಡಾ ವಿನೇಶ್‌ ಪ್ಯಾರಿಸ್‌ನಿಂದ ದೆಹಲಿಗೆ ಬಂದಿದ್ದ ವೇಳೆ ಅವರನ್ನು ಸ್ವಾಗತಿಸಿದ ಮೊದಲ ರಾಜಕೀಯ ನಾಯಕರಾಗಿ ಕಾಣಿಸಿಕೊಂಡಿದ್ದರು. ಕಳೆದ ವಾರಷ್ಟೇ ವಿನೇಶ್ ಅವರು ಹರಿಯಾಣದ​ ಮಾಜಿ  ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ(Bhupinder Singh Hooda) ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇದೇ ವೇಳೆ ಹೂಡಾ ಯಾರೇ ಕಾಂಗ್ರೆಸ್‌ಗೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದರು.

ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜೇಶ್ ಶರಣ್ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಭಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲ್ಲಿಕ್ ದೆಹಲಿ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆಯಲ್ಲಿ ಬಿಜೆಪಿಯಿಂದ ಕುಸ್ತಿಪಟುಗಳಿಗೆ ಸೂಕ್ತ ಬೆಂಬಲ ಸಿಗದೇ ಇದ್ದಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.