Sunday, 13th October 2024

Haryana Polls: ಹರಿಯಾಣ ವಿಧಾನಸಭಾ ಚುನಾವಣೆ; ಕಣಕ್ಕಿಳಿದ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌: ಯಾವ ಪಕ್ಷ?

Haryana Polls

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆ(Haryana Polls)ಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಹರಿಯಾಣದ ಕುರುಕ್ಷೇತ್ರ ಕ್ಷೇತ್ರದ ಬಿಜೆಪಿ ಸಂಸದ ನವೀನ್‌ ಜಿಂದಾಲ್‌ ಅವರ ತಾಯಿ, ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ (Savitri Jindal) ಹಿಸಾರ್‌ (Hisar) ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗುರುವಾರ (ಸೆಪ್ಟೆಂಬರ್‌ 12) ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಖ್ಯಾತ ಕೈಗಾರಿಕೋದ್ಯಮಿ ದಿವಂಗತ ಒ.ಪಿ.ಜಿಂದಾಲ್ ಅವರ ಪತ್ನಿ 74 ವರ್ಷದ ಸಾವಿತ್ರಿ ಅವರು ಹರಿಯಾಣ ಸಚಿವ ಮತ್ತು ಹಿಸಾರ್‌ನ ಹಾಲಿ ಶಾಸಕ ಕಮಲ್ ಗುಪ್ತಾ ವಿರುದ್ಧ ಕಣಕ್ಕೆ ಇಳಿದ್ದಾರೆ. 29.1 ಬಿಲಿಯನ್ (2,900 ಕೋಟಿ ರೂ.) ಡಾಲರ್ ನಿವ್ವಳ ಆಸ್ತಿ ಮೌಲ್ಯ ಹೊಂದಿರುವ ಸಾವಿತ್ರಿ ಅವರನ್ನು ಫೋರ್ಬ್ಸ್ ಇಂಡಿಯಾ ಈ ವರ್ಷದ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಹೆಸರಿಸಿದೆ.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, “ಹಿಸಾರ್‌ ಕ್ಷೇತ್ರದ ಅಭಿವೃದ್ಧಿ ಮತ್ತು ಪರಿವರ್ತನೆಗಾಗಿ ಸೇವೆ ಸಲ್ಲಿಸುವುದಾಗಿ ನಾನು ಪ್ರತಿಜ್ಞೆ ಕೈಗೊಂಡಿದ್ದೇನೆ. ಹಿಸಾರ್‌ನ ಜನತೆ ನನ್ನ ಕುಟುಂಬ ಮತ್ತು ಓಂ ಪ್ರಕಾಶ್ ಜಿಂದಾಲ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಜಿಂದಾಲ್ ಕುಟುಂಬವು ಹಿಂದೆಯೂ ಹಿಸಾರ್‌ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಲ್ಲಿಸಿದೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.

ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಕಮಲ್ ಗುಪ್ತಾ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಪಕ್ಷೇತರರಾಗಿ ಸ್ಪರ್ಧಿಸುವುದರಿಂದ ಬಂಡಾಯ ಎದ್ದಂತಾಗುದಿಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇದನ್ನು ಹಾಗೆ ಪರಿಗಣಿಸಲಾಗುವುದಿಲ್ಲ. ಲೋಕಸಭಾ ಚುನಾವಣೆ ವೇಳೆ ನಾನು ಮಗನ (ನವೀನ್ ಜಿಂದಾಲ್) ಪರವಾಗಿ ಮಾತ್ರ ಪ್ರಚಾರ ಮಾಡಿದ್ದೆ. ಅದು ಬಿಟ್ಟರೆ ನಾನು ಬಿಜೆಪಿಯ ಯಾವುದೇ ಸದಸ್ಯತ್ವವನ್ನು ಪಡೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸಾವಿತ್ರಿ ಜಿಂದಾಲ್ ಈ ಹಿಂದೆ ಹಿಸಾರ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 2005ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಹಿಸಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2009ರಲ್ಲಿ ಮರು ಆಯ್ಕೆಯಾಗಿದ್ದರು ಮತ್ತು 2013ರಲ್ಲಿ ಸಚಿವರಾಗಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಅವರ ಪುತ್ರ ನವೀನ್ ಜಿಂದಾಲ್ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು. ಈ ವೇಳೆ ಸಾವಿತ್ರಿ ಅವರು ಕಾಂಗ್ರೆಸ್ ತೊರೆದಿದ್ದರು. ಬಿಜೆಪಿಯಿಂದ ಈ ಬಾರಿ ಟಿಕೆಟ್‌ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಕೇಸರಿ ಪಾಳಯ ಕಮಲ್ ಗುಪ್ತಾ ಅವರನ್ನು ಮತ್ತೆ ಕಣಕ್ಕಿಳಿಸಿದೆ.

ಯಾವಾಗ ಚುನಾವಣೆ?

90 ಕ್ಷೇತ್ರಗಳ ಹರಿಯಾಣ ವಿಧಾನಭೆಗೆ ಅಕ್ಟೋಬರ್‌ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 8ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಬಾರಿ ಘಟಾನುಘಟಿಗಳ ಸ್ಪರ್ಧೆಯಿಂದ ಹರಿಯಾಣ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಮಾಜಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.

ಈ ಸುದ್ದಿಯನ್ನೂ ಓದಿ: Haryana Polls: ವಿನೇಶ್‌ ಫೋಗಟ್‌ ನಾಮಪತ್ರ ಸಲ್ಲಿಕೆ; ಆಸ್ತಿ ವಿವರ ಹೀಗಿದೆ