Friday, 20th September 2024

Haryana Polls: ರಾಹುಲ್ ಗಾಂಧಿ ಭೇಟಿಯಾದ ಬಜರಂಗ್ ಪುನಿಯಾ,ವಿನೇಶ್ ಫೋಗಟ್; ಹರಿಯಾಣ ಚುನಾವಣೆಯಲ್ಲಿ ಸ್ಪರ್ಧೆ ಖಚಿತ?

Haryana Polls

ನವದೆಹಲಿ:  ಭಾರತದ ಖ್ಯಾತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ(Bajrang Punia) ಹಾಗೂ ವಿನೇಶ್ ಫೋಗಟ್(Vinesh Phogat) ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ(Haryana Assembly election) ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಭಯ ಕುಸ್ತಿಪಟುಗಳು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೂ ಮುನ್ನವೇ ಕಾಂಗ್ರೆಸ್ ವರಿಷ್ಠರನ್ನು ಕುಸ್ತಿಪಟುಗಳು ಭೇಟಿ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿನೇಶ್‌ ಮತ್ತು ಬಜರಂಗ್‌  ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ತೆರಳಿ, ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಆದರೆ, ಯಾವ ವಿಚಾರ ಕುರಿತು ಮಾತನಾಡಿದ್ದಾರೆ ಎಂಬುದರ ವಿವರ ತಿಳಿದುಬಂದಿಲ್ಲ. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜೇಶ್ ಶರಣ್ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಭಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲ್ಲಿಕ್ ದೆಹಲಿ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆಯಲ್ಲಿ ಬಿಜೆಪಿಯಿಂದ ಕುಸ್ತಿಪಟುಗಳಿಗೆ ಸೂಕ್ತ ಬೆಂಬಲ ಸಿಗದೇ ಇದ್ದಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.

https://x.com/INCIndia/status/1831203808241647919

ಭೂಪಿಂದರ್ ಸಿಂಗ್ ಭೇಟಿ ಮಾಡಿದ್ದ ವಿನೇಶ್‌

ಕಳೆದ ವಾರಷ್ಟೇ ವಿನೇಶ್ ಅವರು ಹರಿಯಾಣದ​ ಮಾಜಿ  ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ(Bhupinder Singh Hooda) ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇದೇ ವೇಳೆ ಹೂಡಾ ಯಾರೇ ಕಾಂಗ್ರೆಸ್‌ಗೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದರು. ಮೂಲಗಳ ಪ್ರಕಾರ  ವಿನೇಶ್​ ಅವರು ತಮ್ಮ ಸೋದರ ಸಂಬಂಧಿ, ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಆದರೆ, ಬಜರಂಗ್‌ ಅವರು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್​ ಫೈನಲ್​ ಪಂದ್ಯಕ್ಕೆ ಕೆಲವೆ ಗಂಟೆಗಳು ಇರುವಾಗ ನಿಯಮಿತ ತೂಕಕ್ಕಿಂತ ಹೆಚ್ಚು ತೂಕ ಇದ್ದ ಕಾರಣ ಅನರ್ಹಗೊಂಡು ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು. ಅನರ್ಹತೆಯ ವಿರುದ್ಧ ಅವರು ಸಲ್ಲಿದ್ದ ಮನವಿಯನ್ನು ಕೂಡ ಆರ್ಬಿಟ್ರೇಶನ್ ಕೋರ್ಟ್ (CAS) ತಿರಸ್ಕರಿಸಿತ್ತು.