ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ಬಜರಂಗ್ ಪುನಿಯಾ(Bajrang Punia) ಅವರು ಹರಿಯಾಣ ಚುನಾವಣೆಯಲ್ಲಿ(Haryana Polls) ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳ ನಂತರ, ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನುಭೇಟಿಯಾದ ಬಳಿಕ ಪಕ್ಷದ ಪ್ರಧಾನ ಕಚೇರಿಯಲ್ಲಿ ಉಭಯ ಕುಸ್ತಿಪಟುಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು, ಇಂದು ನಮಗೆ ದೊಡ್ಡ ದಿನ. ಈ ಇಬ್ಬರೂ ಆಟಗಾರರು ನಮ್ಮೊಂದಿಗೆ ಸೇರುತ್ತಿರುವುದು ಹೆಮ್ಮೆಯ ಕ್ಷಣ. ವಿನೇಶ್ ಕುಸ್ತಿಪಟುಗಳ ಕುಟುಂಬದಿಂದ ಬಂದವರು. ಆಕೆ 9 ವರ್ಷದವಳಿದ್ದಾಗ ಅವರ ತಂದೆಯನ್ನು ಅವರ ಮುಂದೆ ಗುಂಡಿಕ್ಕಿ ಕೊಲ್ಲಲಾಯಿತು. ಒಂದು ಹೆಣ್ಣು ಅಂತಹ ಕಠಿಣ ಸ್ಥಿತಿ ಎದುರಿಸುವುದನ್ನು ನೀವು ಊಹಿಸಬಲ್ಲಿರಾ? ಎಂದು ಹೇಳಿದ್ದಾರೆ.
LIVE: Eminent personalities join the Indian National Congress at the AICC HQ. https://t.co/SFFVidzxaQ
— Congress (@INCIndia) September 6, 2024
ಪಕ್ಷ ಸೇರ್ಪಡೆಗೂ ಮುನ್ನ ದೆಹಲಿಯಲ್ಲಿ ಫೋಗಟ್ ಮತ್ತು ಪುನಿಯಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಿಂದಿನ ದಿನ ಭೇಟಿಯಾದರು. ಈ ಬಗ್ಗೆ ಪೋಸ್ಟ್ ಮಾಡಿರುವ ಖರ್ಗೆ, “ಚಕ್ ದೇ ಇಂಡಿಯಾ, ಚಕ್ ದೇ ಹರಿಯಾಣ! ವಿಶ್ವದಲ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ನಮ್ಮ ಪ್ರತಿಭಾವಂತ ಚಾಂಪಿಯನ್ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರನ್ನು ಭೇಟಿಯಾಗುತ್ತಿದ್ದೇವೆ. ನಿಮ್ಮಿಬ್ಬರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.
ಮೂಲಗಳ ಪ್ರಕಾರ, ವಿನೇಶ್ ಜೂಲಾನಾ ಅಥವಾ ದಾದ್ರಿ ವಿಧಾನಸಭೆಯಿಂದ ಸ್ಪರ್ಧಿಸುವ ಸಾಧ್ಯತೆಯಿದ್ದರೆ, ಪುನಿಯಾ ಬದ್ಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹರಿಯಾಣದಲ್ಲಿ ಮೈತ್ರಿ ಕುರಿತು ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಎರಡೂ ಪಕ್ಷಗಳ ಉನ್ನತ ನಾಯಕರ ನಡುವೆ ಮಾತುಕತೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ತವರಿಗೆ ಮರಳಿದಾಗಿನಿಂದಲೂ ಕಾಂಗ್ರೆಸ್ ನಾಯಕರು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ರೋಹ್ಟಕ್ ಸಂಸದ ದೀಪೇಂದರ್ ಹೂಡಾ ವಿನೇಶ್ ಪ್ಯಾರಿಸ್‌ನಿಂದ ದೆಹಲಿಗೆ ಬಂದಿದ್ದ ವೇಳೆ ಅವರನ್ನು ಸ್ವಾಗತಿಸಿದ ಮೊದಲ ರಾಜಕೀಯ ನಾಯಕರಾಗಿ ಕಾಣಿಸಿಕೊಂಡಿದ್ದರು. ಕಳೆದ ವಾರಷ್ಟೇ ವಿನೇಶ್ ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ(Bhupinder Singh Hooda) ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇದೇ ವೇಳೆ ಹೂಡಾ ಯಾರೇ ಕಾಂಗ್ರೆಸ್‌ಗೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Haryana Polls: ಇಂದು ವಿನೇಶ್, ಬಜರಂಗ್ ಕಾಂಗ್ರೆಸ್ ಸೇರ್ಪಡೆ