Friday, 20th September 2024

Haryana Polls: ರಾಹುಲ್‌ ಗಾಂಧಿ ವಿರುದ್ಧವೂ ವಿನೇಶ್‌ ಲೈಂಗಿಕ ಕಿರುಕುಳ ಆರೋಪ ಮಾಡಬಹುದು; ಬ್ರಿಜ್‌ ಭೂಷಣ್‌

Haryana Polls

ನವದೆಹಲಿ: ಹರ್ಯಾಣ ಚುನಾವಣೆ(Haryana Polls) ಹಿನ್ನಲೆಯಲ್ಲಿ(Haryana Assembly elections) ಕಾಂಗ್ರೆಸ್‌ ಸೇರ್ಪಡೆಯಾಗಿರುವ ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಹಾಗೂ ಬಜರಂಗ್‌ ಪೂನಿಯಾ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಕುಸ್ತಿ ಫೆಡರೇಶನ್‌ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ಗೆ(Brij Bhushan Sharan Singh) ಬಿಜೆಪಿ(BJP) ತಾಕೀತು ಮಾಡಿದ್ದರೂ ಕೂಡ ಬ್ರಿಜ್‌ ಭೂಷಣ್‌ ಅವರು ವಿನೇಶ್‌ ವಿರುದ್ಧ ಕಿಡಿಕಾರಿದ್ದಾರೆ. ಮುಂದಿನ ದಿನಗಳಲ್ಲಿ ರಾಹುಲ್‌ ಗಾಂಧಿ ವಿರುದ್ಧವೂ ವಿನೇಶ್‌ ಲೈಂಗಿಕ ಕಿರುಕುಳ ಆರೋಪ ಮಾಡಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಬ್ರಿಜ್​ಭೂಷಣ್​, ಬಿಜೆಪಿಯನ್ನು ಅಸ್ಥಿರಗೊಳಿಸಲು ಹಾಗೂ ಕುಸ್ತಿ ಫೆಡರೇಷನ್ ತಮ್ಮ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್​ ಕುಸ್ತಿಪಟುಗಳನ್ನು ದಾಳವಾಗಿ ಬಳಸಿಕೊಂಡಿದೆ. ಕುಸ್ತಿಪಟುಗಳು ಅಂದು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್​ನ ಷಡ್ಯಂತ್ರ ಎಂದಿದ್ದಾರೆ.

ಮಹಿಳಾ ಕುಸ್ತಿಪಟುಗಳ ಜತೆ ಫೋಟೊ ತೆಗಿಸಿಕೊಂಡಿರುವ ರಾಹುಲ್​ ಗಾಂಧಿ ಎಚ್ಚರಿಕೆ ವಹಿಸಿಕೊಳ್ಳಬೇಕು. ಏಕೆಂದರೆ ನಾನು ಎಲ್ಲಿಯೂ ಮಹಿಳಾ ಕುಸ್ತಿಪಟುಗಳ ಜತೆ ಕಾಣಿಸಿಕೊಳ್ಳದಿದ್ದರೂ ಕೂಡ ನನ್ನ ವಿರುದ್ಧ ಲೈಗಿಂಕ ಕಿರುಕುಳ ಆರೋಪ ಮಾಡಿದ್ದರು. ಹೀಗಾಗಿ ಆತ್ಮೀಯವಾಗಿ ಫೋಟೊ ತೆಗೆಸಿಕೊಂಡಿರುವ ರಾಹುಲ್‌ ಗಾಂಧಿ ಮೇಲೆ ಮುಂದಿನ ದಿನಗಳಲ್ಲಿ ಅಧಿಕಾರದ ಆಸೆಗಾಗಿ ವಿನೇಶ್‌ ಲೈಂಗಿಕ ಕಿರುಕುಳದ ಆರೋಪ ಮಾಡಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ವಿನೇಶ್‌ ಮತ್ತು ಬಜರಂಗ್‌ರ ಕಾಂಗ್ರೆಸ್‌ ಸೇರ್ಪಡೆ ಟೀಕಿಸಿದ್ದಬ್ರಿಜ್‌ ಭೂಷಣ್‌, “ಇವರಿಬ್ಬರು ಕುಸ್ತಿಯಲ್ಲಿ ಗಳಿಸಿದ್ದ ಜನಪ್ರಿಯತೆ ಕಾಂಗ್ರೆಸ್‌ ಸೇರ್ಪಡೆಯ ಬಳಿಕ ಜನಮಾನಸದಲ್ಲಿ ಅಳಿಸಿ ಹೋಗಲಿದೆ ಎಂದಿದ್ದರು. ಕುಸ್ತಿಪಟುಗಳ ಬ್ರಿಜ್​ಭೂಷಣ್​ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ದೇಶಾದ್ಯಂತ ವ್ಯಾಪಕ ಸದ್ದು ಮಾಡಿತ್ತು. ಇದರ ಪರಿಣಾಮವಾಗಿ ಬ್ರಿಜ್​ಭೂಷಣ್​ಗೆ ಕಳೆದ ಲೋಕಸಭಾ ಟಿಕೆಟ್‌ ಮಿಸ್‌ ಆಗಿತ್ತು. ಅವರ ಬದಲಿಗೆ ಮಗನಿಗೆ ಟಿಕೆಟ್​ ನೀಡಲಾಗಿತ್ತು.

ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್‌

ಕಳೆದ ವರ್ಷ ಬ್ರಿಜ್‌ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (354, 354 ಎ ಮತ್ತು 354 ಡಿ) ಅಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು. ಬಳಿಕ ಬ್ರಿಜ್‌ ಭೂಷಣ್‌ ಜಾಮೀನು ಪಡೆದಿದ್ದರು. ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್​ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ವಿನೇಶ್‌ ಪೋಗಟ್‌ ಸ್ಪರ್ಧಿಸುತ್ತಿರುವ ಜುಲಾನ ಕ್ಷೇತ್ರದಲ್ಲಿ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಅವರನ್ನು ಕಣಕ್ಕಿಳಿಸಿದೆ. ಆ ಮೂಲಕ ಎರಡು ಪಕ್ಷಗಳ ನಡುವೆ ನೆಕ್‌ ಟು ನೆಕ್‌ ಫೈಟ್‌ ಏರ್ಪಡಲಿದೆ. ಇನ್ನು ಯೋಗೇಶ್‌ ಬೈರಾಗಿ ಅವರು ರಾಜ್ಯ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಪಕ್ಷದ ಹರ್ಯಾಣ ಕ್ರೀಡಾ ಸೆಲ್‌ನ ಉಪಾಧ್ಯಕ್ಷರೂ ಹೌದು.