Friday, 22nd November 2024

Haryana Polls: ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಕುಸ್ತಿಪಟು ವಿನೇಶ್‌ ಫೋಗಟ್‌

Haryana Polls

ಚಂಡೀಗಢ: ಹರಿಯಾಣ ವಿಧಾನಸಭಾ (Haryana Polls) ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಸದ್ಯ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಹ್ಯಾಟ್ರಿಕ್‌ ಕನಸು ಕಾಣುತ್ತಿರುವ ಬಿಜೆಪಿಗೆ ಹಿನ್ನಡೆಯಾಗುವ ಎಲ್ಲ ಸಾಧ್ಯತೆಯೂ ಕಾಣಿಸುತ್ತಿದೆ. ಈ ಮಧ್ಯೆ ಇಡೀ ದೇಶದ ಗಮನ ಸೆಳೆದ ಜುಲಾನಾ ಕ್ಷೇತ್ರದ ಕಾಂಗ್ರೆಸ್(Congress) ಅಭ್ಯರ್ಥಿ, ಮಾಜಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಮುನ್ನಡೆ ಸಾಧಿಸಿದ್ದಾರೆ.

ವಿನೇಶ್ ಫೋಗಟ್ ಅವರ ಪಾಲಿಗೆ 2024 ಎನ್ನುವುದು ನಿರ್ಣಾಯಕ ವರ್ಷ ಎನಿಸಿಕೊಂಡಿದೆ. ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಒಲಿಂಪಿಕ್ಸ್‌ ಪದಕದಿಂದ ವಂಚಿತರಾಗಿದ್ದ ಅವರು ಬಳಿಕ ರಾಜಕೀಯಕ್ಕೆ ಧುಮುಕಿದ್ದರು. ಕಾಂಗ್ರೆಸ್‌ನಿಂಡ ಟಿಕೆಟ್‌ ಪಡೆದು ಜಿಂದ್ ಜಿಲ್ಲೆಯ ಜುಲಾನಾದಿಂದ ಕಣಕ್ಕಿಳಿದಿದ್ದಾರೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ ಅವರು ಕುಸ್ತಿಪಟು ಬಿಜೆಪಿಯ ಯೋಗೇಶ್ ಕುಮಾರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಜಾಟ್ ಪ್ರಾಬಲ್ಯದ ಬಂಗಾರ್ ಪ್ರದೇಶದ ಜುಲಾನಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಜನನಾಯಕ್ ಜನತಾ ಪಾರ್ಟಿ (JJP)ಯಂತಹ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿದ್ದವು. 2009 ಮತ್ತು 2014ರಲ್ಲಿ ಐಎನ್‌ಎಲ್‌ಡಿಯ ಪರ್ಮಿಂದರ್ ಸಿಂಗ್ ಗೆದ್ದಿದ್ದರೆ, ಜೆಜೆಪಿಯ ಅಮರ್‌ಜೀತ್ ಧಂಡಾ 2019ರಲ್ಲಿ ಗೆಲುವು ಸಾಧಿಸಿದ್ದರು. ಅಲ್ಲದೆ ಈ ಬಾರಿ ವಿನೇಶ್‌ ಫೋಗಟ್‌ ಮತ್ತು ಯೋಗೇಶ್ ಭೈರಾಗಿ ಸ್ಪರ್ಧೆಯಿಂದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ.

ಇಂದು ಹರಿಯಾಣದ ಜತೆಗೆ ಜಮ್ಮು ಮತ್ತು ಕಾಸ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಪ್ರಕಟವಾಗುತ್ತಿದೆ. ಹರಿಯಾಣದಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ1,031 ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಇನ್ನು ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದೆ.

ಸಮೀಕ್ಷೆಗಳು ಹೇಳೋದೇನು?

ಜಮ್ಮು-ಕಾಶ್ಮೀರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆಗಳು ಎರಡು ದಿನಗಳ ಹಿಂದೆ ಹೊರಬಿದ್ದಿದೆ. ಕಣಿವೆ ರಾಜ್ಯದ ಜಮ್ಮು ಕಾಶ್ಮೀರದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲದಿದ್ದರೂ, ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಮತ್ತೊಂದು ಹರಿಯಾಣದಲ್ಲಿ ಬಿಜೆಪಿಯ ಹ್ಯಾಟ್ರಿಕ್‌ ಗೆಲವಿನ ಕನಸು ನುಚ್ಚುನೂರಾಗಲಿದ್ದು, ಕಾಂಗ್ರೆಸ್‌ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿದಿದೆ.

ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ತಿರಸ್ಕರಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಬಿಜೆಪಿ ಪೂರ್ಣ ಬಹುಮತದೊಂದಿಗೆ ಮೂರನೇ ಬಾರಿಗೆ ಸರ್ಕಾರ ರಚಿಸುತ್ತದೆ ಮತ್ತು ಬಿಜೆಪಿಯ ಪ್ರಚಂಡ ಗೆಲುವಿನ ನಂತರ ಕಾಂಗ್ರೆಸ್ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ದೂಷಿಸುತ್ತದೆ ಎಂದು ಹೇಳಿದ್ದಾರೆ.

ಆರ್ಟಿಕಲ್ 370 ರದ್ದತಿ ನಂತರ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲ್ಪಟ್ಟ ಜಮ್ಮು ಕಾಶ್ಮೀರದಲ್ಲಿ, 10 ವರ್ಷಗಳ ಅಂತರದ ನಂತರ ವಿಧಾನಸಭೆ ಚುನಾವಣೆಗಳು ನಡೆದಿವೆ. ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟವು ಏಕೈಕ ಅತಿ ದೊಡ್ಡ ಚುನಾವಣಾ ಪೂರ್ವ ಮೈತ್ರಿಯಾಗಿ ಹೊರಹೊಮ್ಮಲಿದೆ ಎಂದು ಊಹಿಸಲಾಗಿದೆಯಾದರೂ, ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಕ್ಕಿಲ್ಲ.

ಈ ಸುದ್ದಿಯನ್ನೂ ಓದಿ: Haryana Election: ಎಕ್ಸಿಟ್‌ ಪೋಲ್‌ ಪ್ರಕಟ; ಹರಿಯಾಣ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ- ಹೂಡಾ, ಸೆಲ್ಜಾ ನಡುವೆ ಪೈಪೋಟಿ