Friday, 22nd November 2024

Haryana Polls: ವಿನೇಶ್‌ ಫೋಗಟ್‌ ನಾಮಪತ್ರ ಸಲ್ಲಿಕೆ; ಆಸ್ತಿ ವಿವರ ಹೀಗಿದೆ

Haryana Polls

ನವದೆಹಲಿ: ಹರ್ಯಾಣ ವಿಧಾನಸಭಾ(Haryana Polls) ಚುನಾವಣೆಯಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಅವರು ಫೋಗಟ್‌ಗೆ ಸಾಥ್ ನೀಡಿದರು. ಚುನಾವಣ ಅಫಿದವಿತ್‌ನಲ್ಲಿ ವಿನೇಶ್‌ ತಮ್ಮ ಚರಾಸ್ತಿ ಮತ್ತುಸ್ಥಿರಾಸ್ತಿ ಆಸ್ತಿ ವಿವರವನ್ನು ಉಲ್ಲೇಖೀಸಿದ್ದಾರೆ. ಒಟ್ಟಾರೆಯಾಗಿ ಸುಮಾರು 3 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ವಿನೇಶ್‌ ಫೋಗಟ್‌ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.

ವಿನೇಶ್‌ ಫೋಗಟ್‌ ತಮ್ಮ ಬಳಿ ಮೂರು ಕಾರುಗಳು ಇರುವುದಾಗಿ ತಿಳಿಸಿದ್ದಾರೆ. ವೋಲ್ವೋ ಎಕ್ಸ್‌ಸಿ 60, ಹುಂಡೈ ಕ್ರೇಟಾ ಹಾಗೂ ಟೊಯೋಟಾ ಇನ್ನೊವಾ ಕಾರುಗಳು ತಮ್ಮ ಬಳಿ ಇರುವುದಾಗಿ ಹೇಳಿದ್ದಾರೆ. ಇವುಗಳ ಮೌಲ್ಯ ಕ್ರಮವಾಗಿ 35 ಲಕ್ಷ ರೂ., 12 ಲಕ್ಷ ರೂ. ಹಾಗೂ 17 ಲಕ್ಷ ರೂ. ಎಂದು ನಮೂದಿಸಿದ್ದಾರೆ. ನ್ನೋವಾ ಕಾರು ಖರೀದಿಸಲು ಪಡೆದುಕೊಂಡಿರುವ 13 ಲಕ್ಷ ರೂ. ಸಾಲವನ್ನು ಪಾವತಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ಇದಲ್ಲದೆ ಅವರ ಪತಿ ಸೋಮ್‌ವೀರ್‌ ರಾಥಿ ಮಹೀಂದ್ರಾ ಸ್ಕಾರ್ಪಿಯೋ ಕಾರು ಹೊಂದಿದ್ದಾರೆ. ಇದರ ಮೌಲ್ಯ 19 ಲಕ್ಷ ರೂ. ಎಂದು ತಿಳಿಸಿದ್ದಾರೆ.

ಇದನ್ನೂ ಓದಿ Haryana Polls: ರಾಹುಲ್‌ ಗಾಂಧಿ ವಿರುದ್ಧವೂ ವಿನೇಶ್‌ ಲೈಂಗಿಕ ಕಿರುಕುಳ ಆರೋಪ ಮಾಡಬಹುದು; ಬ್ರಿಜ್‌ ಭೂಷಣ್‌

ಸೋನಿಪತ್‌ನಲ್ಲಿ ಸುಮಾರು 1.85 ಕೋಟಿ ರೂ. ಮೌಲ್ಯದ ಜಾಗ, ಕೈಯಲ್ಲಿ 1.95 ಲಕ್ಷ ರೂ. ನಗದು ಇರುವುದಾಗಿ ತಿಳಿಸಿದ್ದಾರೆ. ಒಟ್ಟು 1.10 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಆಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಇದರಲ್ಲಿ 40 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ಇದರ ಜೊತೆ 1.50 ಲಕ್ಷ ರೂ. ಪ್ರೀಮಿಯಂನ ವಿಮೆಯನ್ನೂ ಹೊಂದಿದ್ದಾರೆ. ಹೀಗೆ ವಿನೇಶ್‌ ಫೋಗಟ್‌ ಬಳಿ ಒಟ್ಟು 1.10 ಕೋಟಿ ರೂ. ಚರಾಸ್ತಿ ಇದೆ.

ಜಾಟ್ ಪ್ರತಿನಿಧಿಯಾಗಿ ವಿನೇಶ್ ಕಾಂಗ್ರೆಸ್‌ಗೆ ಪ್ರವೇಶಿಸಿದ್ದು ಜುಲಾನಾದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಜಾಟ್ ಪ್ರಾಬಲ್ಯದ ಬಂಗಾರ್ ಪ್ರದೇಶದ ಜುಲಾನಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಜನನಾಯಕ್ ಜನತಾ ಪಾರ್ಟಿ (JJP) ಯಂತಹ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. 2009 ಮತ್ತು 2014ರಲ್ಲಿ ಐಎನ್‌ಎಲ್‌ಡಿಯ ಪರ್ಮಿಂದರ್ ಸಿಂಗ್ ಗೆದ್ದಿದ್ದರೆ, ಜೆಜೆಪಿಯ ಅಮರ್‌ಜೀತ್ ಧಂಡಾ 2019ರಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.